ಬೆಂಗಳೂರು, ಜೂ 15 (DaijiworldNews/PY): "ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಕೆಲವರಿಗೆ ಬೇಸರ ಇರಬಹುದು. ಅವರನ್ನು ಕರೆದು ಅರುಣ್ ಸಿಂಗ್ ಅವರು ಮಾತನಾಡುತ್ತಾರೆ. ನಮ್ಮಲ್ಲಿ ನಾಯಕತ್ವದ ವಿಚಾರದ ಬಗ್ಗೆ ಯಾವುದೇ ಗೊಂದಲವಿಲ್ಲ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ನಾವು ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ. ನಾಯಕತ್ವದ ಬಗೆಯಾಗಲಿ ಅಥವಾ ಯಾವುದೇ ಬೇರೆ ವಿಚಾರದ ಬಗ್ಗೆ ಗೊಂದಲ ಇಲ್ಲ" ಎಂದಿದ್ದಾರೆ.
ಅರುಣ್ ಸಿಂಗ್ ಅವರೊಂದಿಗೆ ಮತ್ತೋರ್ವ ವೀಕ್ಷಕ ರಾಜ್ಯಕ್ಕೆ ಬರಬೇಕು ಎನ್ನುವ ಕೆಲವು ಶಾಸಕರ ಆಗ್ರಹದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ, "ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಬೇಡಿ. ಅರುಣ್ ಸಿಂಗ್ ಅವರು ನಮ್ಮ ರಾಜ್ಯದ ಉಸ್ತುವಾರಿಗಳು. ಅವರು ನಾಳೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಎಲ್ಲಾ ಶಾಸಕರು, ಸಂಸದರೊಂದಿಗೆ ಅವರು ಚರ್ಚೆ ನಡೆಸಲಿದ್ದಾರೆ. ಅವರನ್ನು ಯಾರೂ ಬೇಕಾದರೂ ಭೇಟಿಯಾಗಬಹುದು" ಎಂದು ಹೇಳಿದ್ದಾರೆ.
"ಅರುಣ್ ಸಿಂಗ್ ಅವರು ಗೆಸ್ಟ್ ಹೌಸ್ನಲ್ಲಿ ಇರಲಿದ್ದಾರೆ. ಅವರು ಎಲ್ಲಾ ವಿಚಾರಗಳ ಬಗ್ಗೆ ತಿಳಿದುಕೊಳ್ಳಲಿದ್ದಾರೆ. ನಾನು ಕೂಡಾ ಅರುಣ್ ಸಿಂಗ್ ಅವರೊಂದಿಗೆ ಇರಲಿದ್ದು, ಅವರಿಗೆ ಎಲ್ಲಾ ರೀತಿಯಾದ ಸಹಕಾರ ನೀಡಲಿದ್ದೇನೆ" ಎಂದಿದ್ದಾರೆ.
ಎರಡನೇ ಹಂತದ ಅನ್ಲಾಕ್ ಮಾಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇಂದು ಹಾಗೂ ನಾಳಿನ ಪರಿಸ್ಥಿತಿಯನ್ನು ಗಮನಿಸಿ ನಿರ್ಧಾರ ಕೈಗೊಳ್ಳುತ್ತೇವೆ. ಎರಡನೇ ಹಂತದ ಸಂದರ್ಭ ಯಾವುದಕ್ಕೆಲ್ಲಾ ವಿನಾಯಿತಿ ನೀಡಬೇಕು ಎಂಬ ಬಗ್ಗೆ ಯೋಚಿಸಿ ತಿಳಿಸಲಾಗುವುದು" ಎಂದು ಹೇಳಿದ್ದಾರೆ.