ಆಗ್ರಾ, ಜೂ.15 (DaijiworldNews/HR): ಆಗ್ರದ ಧರಿಯೈ ಗ್ರಾಮದಲ್ಲಿ ಐದು ವರ್ಷದ ಮಗುವೊಂದು ಆಟವಾಡುತ್ತಿದ್ದ ವೇಳೆ 150 ಅಡಿ ಆಳದ ಕೊಳವೆ ಬಾವಿಗೆ ಸೋವವಾರ ಬಿದ್ದಿದ್ದು, ಸತತ ಎಂಟು ಗಂಟೆಗಳ ಕಾರ್ಯಚರಣೆಯ ಬಳಿಕ ಮಗುವನ್ನು ಕೊಳವೆ ಬಾವಿಯಿಂದ ಮೇಲಕ್ಕೆತ್ತಿದ್ದಾರೆ.
ಎನ್ಡಿಆರ್ಎಫ್ ಮತ್ತು ಜಿಲ್ಲಾ ಸರ್ಕಾರದ ತಂಡದ ಕಾರ್ಯಚರಣೆಯಿಂದ ಮಗುವನ್ನು ರಕ್ಷಿಸಲಾಗಿದೆ.
ಮಗುವಿನ ತಂದೆ ಛೋಟೆಲಾಲ್ ಅವರು ತಮ್ಮ ಕೃಷಿಗೆ ಬಳಸುವುದಕ್ಕಾಗಿ ಕೊಳವೆ ಬಾವಿಯನ್ನು ಕೊರೆಸಿದ್ದು, ಇದು ಮನೆಯಿಂದ ಸುಮಾರು 20 ಅಡಿ ದೂರದಲ್ಲಿ ಇದೆ ಎನ್ನಲಾಗಿದೆ.
ಸ್ಥಳದಲ್ಲಿದ್ದ ಆಗ್ರಾ ಎಸ್ಎಸ್ಪಿ ಮುನಿರಾಜ್ ಜಿ ಮಾಹಿತಿ ನೀಡಿದ್ದು, "ಬಾಲಕನನ್ನು ಕೊಳವೆ ಬಾವಿಯಿಂದ ರಕ್ಷಿಸಲಾಗಿದ್ದು, ವೈದ್ಯರ ತಂಡ ಪರೀಕ್ಷಿಸಿ ಬಳಿಕ ಮಗುವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ" ಎಂದು ತಿಳಿಸಿದ್ದಾರೆ.
ಎಸ್ಪಿ (ಪೂರ್ವ ಆಗ್ರಾ) ಕೆ ವೆಂಕಟ್ ಅಶೋಕ್ ಮಾತನಾಡಿ, "ರಕ್ಷಣಾ ಕಾರ್ಯಾಚರಣೆ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಿ ಸಂಜೆ 4: 30 ಕ್ಕೆ ಕೊನೆಗೊಂಡಿತು. "ನಾವು ಕೊಳವೆ ಬಾವಿಯ ಒಳಗೆ ಆಮ್ಲಜನಕವನ್ನು ಪಂಪ್ ಮಾಡಿದ್ದು, ಮಗುವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಎರಡು ಕ್ಯಾಮೆರಾಗಳನ್ನು ಬಿಟ್ಟಿದ್ದು, ಆತ ಬಾವಿಯೊಲಗಿನಿಂದ ಪ್ರತಿಕ್ರಿಯಿಸುತ್ತಿರುವುದರಿಂದ ಅವನು ಚೆನ್ನಾಗಿರುತ್ತಾನೆ ಎಂದು ನಮಗೆ ತಿಳಿದಿತ್ತು" ಎಂದಿದ್ದಾರೆ.
ಇನ್ನು ಈ ಕಾರ್ಯಾಚರಣೆಯಲ್ಲಿ 32 ಎನ್ಡಿಆರ್ಎಫ್, ಪ್ಯಾರಾ ಬ್ರಿಗೇಡ್ನಿಂದ 32 ಸಿಬ್ಬಂದಿಗಳು, ಸೇನಾ ಸಿಬ್ಬಂದಿ, 28 ಎಸ್ಡಿರ್ಎಫ್ ಪಡೆಗಳು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು.