ನವದೆಹಲಿ, ಜೂ.15 (DaijiworldNews/HR): ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಕುಟುಂಬದವರು ಬಿಜೆಪಿಯನ್ನು ಬೆಂಬಲಿಸಿದ ಕಾರಣಕ್ಕೆ ನಮ್ಮ ಮೇಲೆ ಟಿಎಂಸಿ ಕಾರ್ಯಕರ್ತರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು 60 ವರ್ಷ ವಯಸ್ಸಿನ ಒಬ್ಬ ಮಹಿಳೆ ಹಾಗೂ 17 ವರ್ಷದ ಬಾಲಕಿಯೊಬ್ಬರು ಸುಪ್ರೀಂ ಕೋರ್ಟ್ ಮೊರೆಹೋಗಿದ್ದಾರೆ.
ಈ ಘಟನೆ ಮತ್ತು ಚುನಾವಣೋತ್ತರ ನಡೆದ ಎಲ್ಲಾ ಹಿಂಸಾಚಾರಗಳ ಬಗ್ಗೆ ಎಸ್ಐಟಿ ತನಿಖೆ ನಡೆಸಬೇಕು ಎಂದು ಸಂತ್ರಸ್ತೆಯರು ಒತ್ತಾಯಿಸಿದ್ದಾರೆ.
ಮೇ 4ರಂದು ಮಧ್ಯರಾತ್ರಿಯ ಸಮಯದಲ್ಲಿ ಟಿಎಂಸಿ ಕಾರ್ಯಕರ್ತರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದು, ಮೇ 3ರಂದು ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ, ಹೆಚ್ಚಾಗಿ ಟಿಎಂಸಿ ಕಾರ್ಯಕರ್ತರನ್ನೇ ಒಳಗೊಂಡಿದ್ದ, 100ರಿಂದ 200 ಮಂದಿಯ ಗುಂಪು ನನ್ನನ್ನು ಸುತ್ತುವರಿದು, ಕುಟುಂಬ ಸಹಿತವಾಗಿ ಮನೆಯನ್ನು ಬಿಟ್ಟುಹೋಗುವಂತೆ ಒತ್ತಾಯಿಸಿತು. ಬಿಜೆಪಿ ಬೆಂಬಲಿಗರ ಮನೆಗಳಿಗೆ ಬಾಂಬ್ಗಳನ್ನು ಎಸೆಯುತ್ತಾ ಮನೆಗಳನ್ನು ಸುಟ್ಟುಹಾಕಿತು. ಜನರಿಗೆ ದೈಹಿಕ ಹಿಂಸೆ ನೀಡಲಾಯಿತು. ಮನೆಗಳಲ್ಲಿನ ಒಡವೆಗಳನ್ನು ಕರೆದ್ದೊಯ್ದರು ಎಂದು 60 ವರ್ಷದ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಇನ್ನು ಆಡಳಿತ ಮತ್ತು ಪೊಲೀಸರ ನಿಷ್ಕ್ರಿಯತೆಯು ಇಂಥ ಕೃತ್ಯಗಳಿಗೆ ಪರೋಕ್ಷ ಪ್ರೋತ್ಸಾಹ ನೀಡಿದಲ್ಲದೆ, ಅತ್ಯಾಚಾರಕ್ಕೆ ಒಳಗಾದವರು ದೂರು ನೀಡಲು ಹೋದರೆ ಅವರನ್ನು ಅಪಮಾನಿಸಿರುವುದು ಆಘಾತಕಾರಿಯಾಗಿದೆ. ತನ್ನ ಅಳಿಯನು ಘಟನೆಯ ಬಗ್ಗೆ ದೂರು ನೀಡಲು ಹೋದಾಗ ಪೊಲೀಸರು ದೂರು ದಾಖಲಿಸಲು ನಿರಾಕರಿಸಿದರು. ಎಫ್ಐಆರ್ ದಾಖಲಿಸುವಂತೆ ಸೊಸೆಯು ಹಟ ಹಿಡಿದಾಗ, ಐವರು ಆರೋಪಿಗಳಲ್ಲಿ ಒಬ್ಬ ವ್ಯಕ್ತಿಯ ವಿರುದ್ಧ ಮಾತ್ರ ದೂರು ದಾಖಲಿಸಿದ್ದಾರೆ. ತಮ್ಮನ್ನು ಆ ನಂತರ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ತಪಾಸಣೆಯಿಂದ ದೃಢಪಟ್ಟಿದೆ ಎಂದು ಮಹಿಳೆ ಹೇಳಿದ್ದಾರೆ.
ಮೇ 9ರಂದು ಟಿಎಂಸಿ ಕಾರ್ಯಕರ್ತರು ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಪರಿಶಿಷ್ಟ ಜಾತಿಗೆ ಸೇರಿದ 17 ವರ್ಷದ ಬಾಲಕಿಯೊಬ್ಬಳು, ಘಟನೆಯ ಬಗ್ಗೆ ಎಸ್ಐಟಿ ಅಥವಾ ಸಿಬಿಐ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನು ಸ್ನೇಹಿತರ ಜತೆಗೆ ಮನೆಗೆ ಮರಳುತ್ತಿದ್ದಾಗ ಟಿಎಂಸಿಯ ನಾಲ್ವರು ಕಾರ್ಯಕರ್ತರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದು, ನಮ್ಮ ಕುಟುಂಬದವರು ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ಅತ್ಯಾಚಾರ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.