ಗಾಂಧಿನಗರ, ಜೂ 15( DaijiworldNews/MS): ಆ ಪುಟ್ಟ ಮನೆಯಂತಹ ಗುಡಿಸಲ ಮುಂದೆ ಸುತ್ತಮುತ್ತ ರಕ್ಷಣೆಗಾಗಿ ಪೊಲೀಸರು , ಕಾರಣ ಎರಡು ತಿಂಗಳಲ್ಲಿ ಎರಡು ಬಾರಿ ಅಪಹರಣ.! ಹಾಗೆಂದು ಈ ಮನೆಯ ಸದಸ್ಯ ರಾಜಕಾರಣಿಯೂ ಅಲ್ಲ ಅಥವಾ ಪ್ರಸಿದ್ಧ ವ್ಯಕ್ತಿಯೂ ಅಲ್ಲ..ಕೇವಲ ಎರಡು ತಿಂಗಳ ಮಗು ಎಂದರೆ ನಂಬಲೇಬೇಕು.
ಗುಜರಾತ್ ನಲ್ಲಿ 24x7 ಪೊಲೀಸ್ ರಕ್ಷಣೆಯಲ್ಲಿರುವವರ ಪೈಕಿ ಅತ್ಯಂತ ಕಿರಿಯ ವ್ಯಕ್ತಿ ಎಂದರೆ ಈ ಎರಡು ತಿಂಗಳ ಮಗು. ಗಾಂಧಿನಗರದ ಅದಾಲಾಜ್ ನಲ್ಲಿ ಮನೆಯೊಂದರ ಮುಂದೆ ಮಗುವಿನ ರಕ್ಷಣೆಗಾಗಿ ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟು ಕಾಯುವಂತಹ ಪರಿಸ್ಥಿತಿ ಬಂದಿದೆ.
ಈ ಮಗುವಿನ ಪೋಷಕರು ಅಡಾಲಾಜ್ ತ್ರಿಮಂದಿರ್ ರ ಕೊಳೆಗೇರಿಯಲ್ಲಿ ವಾಸ್ತವ್ಯ ಹೂಡಿದ್ದು, ಮಗು ಹುಟ್ಟಿ ಎರಡೇ ದಿನದಲ್ಲಿ ಈ ಮಗುವನ್ನು ಕಿಡ್ನಾಪ್ ಮಾಡಲಾಗಿತ್ತು. ಏಪ್ರಿಲ್ ನಲ್ಲಿ ಈ ಮಗುವನ್ನು ಕಿಡ್ನಾಪ್ ಮಾಡಲಾಗಿದ್ದು ಪೊಲೀಸರ ಕಾರ್ಯಾಚರಣೆಯ ಬಳಿಕ ಅಪಹರಣಕಾರರಿಂದ ಮಗು ಸುರಕ್ಷಿತವಾಗಿ ಮಗು ತಾಯಿ ಮಡಿಲು ಸೇರಿತ್ತು.. ಇದಾಗಿ ತಿಂಗಳೆರಡು ಕಳೆಯಲಿಲ್ಲ, ಮತ್ತೆ ಜೂನ್ 5 ರಂದು ಮತ್ತೊಂದು ಅಪಹರಣಕಾರ ತಂಡ ಮಗುವನ್ನು ಕಿಡ್ನಾಪ್ ಮಾಡಿತು.
ಅಪಹರಣದ ಎರಡೂ ಘಟನೆಗಳಲ್ಲಿಯೂ, ಅಪಹರಣಕಾರರು ಮಕ್ಕಳಿಲ್ಲದ ದಂಪತಿಗಳಾಗಿದ್ದು, ಅವರು ತಮ್ಮ ಕುಟುಂಬವನ್ನು ಮಗುವಿನೊಂದಿಗೆ ಪೂರ್ಣಗೊಳಿಸಲು ಬಯಸಿದ್ದರು. ಡಬಲ್ ಕಿಡ್ನಾಪ್ ಪ್ರಕರಣದಿಂದ, ಕೊಳೆಗೇರಿಗಳ ಬಳಿ ಪೊಲೀಸರ ವಿಶೇಷ ತಂಡವನ್ನು ನಿಯೋಜಿಸಲು ನಿರ್ಧರಿಸಿದ್ದಾರೆ. ಇದಲ್ಲದೆ, ಮತ್ತೆ ಮಗು ಅಪಹರಣಕಾರರಿಗೆ ಸುಲಭವಾಗಿ ಸಿಗದಂತೆ ಪೋಷಕರಿಗೆ ಉದ್ಯೋಗ ಹಾಗೂ ಮನೆಯೊಂದು ನೀಡಿ ಬೇರೆಡೆ ಸ್ಥಳಾಂತರಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಏಪ್ರಿಲ್ ನಲ್ಲಿ ಎರಡು ದಿನಗಳ ಮಗುವಾಗಿದ್ದಾಗ ಮೆಹ್ಸಾನಾ ಜಿಲ್ಲೆಯ ಕಾಡಿ ಮೂಲದ ಮಕ್ಕಳಿಲ್ಲದ ದಂಪತಿಗಳಾದ ಜಿಗ್ನೇಶ್ ಮತ್ತು ಅಸ್ಮಿತಾ ಭಾರತಿ ಅವರು ಗಾಂಧಿನಗರ ಸಿವಿಲ್ ಆಸ್ಪತ್ರೆಯಿಂದ ಮೊದಲು ಅಪಹರಿಸಿದರು. ಗಾಂಧಿನಗರ ಎಲ್ಸಿಬಿ ಅಪಹರಣಕಾರ ದಾಂಪತಿಗಳನ್ನು ಪತ್ತೆ ಹಚ್ಚಿ ಒಂದು ವಾರದೊಳಗೆ ಮಗುವನ್ನು ರಕ್ಷಿಸಿದೆ. ಇನ್ನು ಎರಡನೇ ಪ್ರಕರಣದಲ್ಲಿ ಮದುವೆಯಾದ ಏಳು ವರ್ಷಗಳ ನಂತರವೂ ಮಗು ಹೊಂದಿರದ ಆರೋಪಿ ದಂಪತಿಗಳಾದ ದಿನೇಶ್ ಮತ್ತು ಸುಧಾ ಕಟಾರಾ ಅವರು ತ್ಯಾಜ್ಯವನ್ನು ಸಂಗ್ರಹಿಸುವಾಗ ತಾಯಿ ಮಗುವನ್ನು ತನ್ನ ಸೈಕಲ್ನಲ್ಲಿ ತಾತ್ಕಾಲಿಕ ತೊಟ್ಟಿಲಲ್ಲಿ ಇಟ್ಟುಕೊಳ್ಳುವುದನ್ನು ನೋಡಿ ಅಪಹರಿಸಿದ್ದರು. ಪೊಲೀಸರು ಗಾಂಧಿನಗರ, ಮೆಹ್ಸಾನಾ, ಅರ್ವಳ್ಳಿ ಮತ್ತು ಗುಜರಾತ್ನ ಸಬರ್ಕಂತಾ ಮತ್ತು ರಾಜಸ್ಥಾನದ ಬನ್ಸ್ವಾಡಾ ಜಿಲ್ಲೆಯ 700 ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾ ಪರಿಶೀಲಿಸಿ ನಾಲ್ಕು ದಿನಗಳ ಬಳಿಕ ಮತ್ತೆ ಮಗುವನ್ನು ಹೆತ್ತವರಿಗೆ ಹಸ್ತಾಂತರಿಸಿದ್ದಾರೆ.
ಹೆತ್ತವರೊಂದಿಗೆ ಫುಟ್ಪಾತ್ ಅಥವಾ ರಸ್ತೆಬದಿಯಲ್ಲಿ ವಾಸಿಸುತ್ತಿರುವ ಮಕ್ಕಳು ಅಪಹರಣಕಾರರಿಗೆ ಸುಲಭವಾದ ಗುರಿಗಳಾಗಿರುವುದರಿಂದ ಈ ಮಗುವಿನ ಪೋಷಕರಿಗೆ ಉದ್ಯೋಗ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಲು ಪೊಲೀಸರು ಮುಂದಾಗಿದ್ದಾರೆ.