ಬೆಂಗಳೂರು, ಜೂ.15 (DaijiworldNews/HR): ರಾಜ್ಯ ಸರಕಾರಿ ನೌಕರರಂತೆಯೇ ಸರಕಾರದ ವಿವಿಧ ಇಲಾಖೆಗಳ ಮತ್ತು ನಿಗಮಗಳ ದಿನಗೂಲಿ ನೌಕರರು ಕೂಡ ಶೇ. 100ರಷ್ಟು ತುಟ್ಟಿ ಭತ್ತೆ ಮತ್ತು ವರ್ಷಕ್ಕೆ 30 ವೇತನ ಸಹಿತ ರಜೆ ಪಡೆಯಲು ಅರ್ಹರಾಗಿದ್ದಾರೆ ಎಂದು ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಕಾಯ್ದೆ-2012ರಡಿ ದಿನಗೂಲಿ ನೌಕರರಿಗೆ ಲಭ್ಯವಾಗುತ್ತಿದ್ದ ಶೇ. 100ರಷ್ಟು ತುಟ್ಟಿ ಭತ್ತೆ ಮತ್ತು ರಜೆ ಕಡಿತಗೊಳಿಸಿ ಸರಕಾರ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ದಿನಗೂಲಿ ನೌಕರರ ಒಕ್ಕೂಟ ಅರ್ಜಿಗಳನ್ನು ಸಲ್ಲಿಸಿದ್ದು, ಅದರ ವಿಚಾರಣೆ ನಡೆಸಿದ ನ್ಯಾಯಪೀಠ ಈ ಆದೇಶ ನೀಡಿದೆ ಎನ್ನಲಾಗಿದೆ.
ಇನ್ನು ನ್ಯಾಯಪೀಠವು ತನ್ನ ಆದೇಶದಲ್ಲಿ, ದಿನಗೂಲಿ ನೌಕರರು ಕಾಯ್ದೆಯ ಪ್ರಕಾರ ಕಾಲಕಾಲಕ್ಕೆ ಸರಕಾರ ನಿಗದಿಪಡಿಸಿದ 100ರಷ್ಟು ತುಟ್ಟಿ ಭತ್ತೆ ಪಡೆಯಲು ಅರ್ಹರಾಗಿದ್ದಾರೆ ಎಂದು ತಿಳಿಸಿದೆ.