ಬೆಂಗಳೂರು, ಜೂ 15 (DaijiworldNews/PY): ಇನ್ಸ್ಟಾಗ್ರಾಂನಲ್ಲಿ ಹೃದಯ ತಜ್ಞ ಎಂದು ಹೇಳಿ ನಕಲಿ ವೈದ್ಯನೋರ್ವ ಮಹಿಳೆಗೆ 80 ಲಕ್ಷ ರೂ. ವಂಚಿಸಿದ ಘಟನೆ ನಗರದ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆರೋಪಿಯನ್ನು ಮಾರ್ಬಿಸ್ ಹಾರ್ಮನ್ ಎಂದು ಗುರುತಿಸಲಾಗಿದೆ.
50 ವರ್ಷದ ವಿಧವೆ ಮಹಿಳೆ ತನ್ನ ಇನ್ಸ್ಟಾಗ್ರಾಂನಲ್ಲಿ ಹೃದಯ ತಜ್ಞರನ್ನು ಹುಡುಕುತ್ತಿದ್ದ ಸಂದರ್ಭ ಮಾರ್ಬಿಸ್ ಹಾರ್ಮನ್ ಎಂಬಾತನ ಪರಿಚಯವಾಗಿದೆ. ಮಹಿಳೆಗೆ ಹೃದಯ ಸಂಬಂಧಿ ಕಾಯಿಲೆ ಇದ್ದ ಕಾರಣ ಆಕೆ ಇನ್ಸ್ಟಾಗ್ರಾಂನಲ್ಲಿ ವೈದ್ಯರನ್ನು ಹುಡುಕುತ್ತಿದ್ದ ವೇಳೆ ಹಾರ್ಮನ್ ಪ್ರೋಫೈಲ್ ಸಿಕ್ಕಿದೆ. ಬಳಿಕ ವಾಟ್ಸಾಪ್ಗೆ ಕನೆಕ್ಟ್ ಆಗಿ, ಆತ ಸಲಹೆ ನೀಡುತ್ತೇನೆ ಎಂದು ಹೇಳಿ ಮಹಿಳೆಯನ್ನು ನಂಬಿಸಿದ್ದ.
ಈ ನಕಲಿ ವೈದ್ಯನಿಂದ ಕೆಲ ದಿನಗಳ ಬಳಿಕ ವಿಧವೆ ಮಹಿಳೆಗೆ ಯುಕೆಯಿಂದ ಕರೆನ್ಸಿ ಹಾಗೂ ಗಿಫ್ಟ್ ಕಳುಹಿಸಿದ್ದ. ಎರಡು ದಿನಗಳ ಬಳಿಕ ಕಸ್ಟಮ್ಸ್ ಅಧಿಕಾರಿಗಳು ಎಂದು ಮಹಿಳೆಗೆ ಕರೆಹೋಗಿದೆ. ನೀವು ಗಿಫ್ಟ್ ಸ್ವೀಕರಿಸಿಲ್ಲ, ವಿತ್ತಸಚಿವಾಲಯದಿಂದ ನೋಟಿಸ್ ಬಂದಿದೆ ಎಂದು ಹೇಳಿ ಕಸ್ಟಮ್ಸ್ ಅಧಿಕಾರಿಗಳು ನಕಲಿ ಪತ್ರವನ್ನು ತೋರಿಸಿದ್ದಾರೆ. ನಂತರ ಮಹಿಳೆಯ ಕೈಯಿಂದ 80 ಲಕ್ಷ ರೂ. ಪಡೆದುಕೊಂಡು ವಂಚಿಸಿದ್ದಾರೆ.
ಘಟನೆಯ ಬಗ್ಗೆ ಮಹಿಳೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.