ಬೆಂಗಳೂರು, ಜೂ. 14 (DaijiworldNews/SM): ರಾಜ್ಯದಲ್ಲಿ ಭಾರೀ ಸಂಚಲನವನ್ನುಂಟು ಮಾಡಿದ್ದ ಸಿಡಿ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಆರೋಪಿ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರಿಗೆ ಹಾಗೂ ತನಿಖಾ ತಂಡಕ್ಕೆ ಹೈಕೋರ್ಟ್ ನೋಟಿಸು ಜಾರಿಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರಭಾವಿ ವ್ಯಕ್ತಿಯಾಗಿದ್ದು, ಎಸ್ ಐಟಿ ಮೇಲೆ ಪ್ರಭಾವ ಬೀರಿದ್ದಾರೆ. ಹಾಗೂ ಅವರನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಯ ವಿರುದ್ಧ ಯುವತಿ ಪ್ರಕರಣ ದಾಖಲಿಸಿದ್ದಾಳೆ. ಅಲ್ಲದೆ, ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಜಾರಕಿಹೊಳಿ ಪ್ರಕರಣ ದಾಖಲಿಸಿದ್ದು, ತನ್ನನ್ನೇ ಆರೋಪಿಯೆಂದು ಬಿಂಬಿಸಿ ತೇಜೋವಧೆ ಮಾಡಲಾಗಿದೆ ಎಂದು ಆಕೆ ಆರೋಪಿಸಿದ್ದಾಳೆ.
ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಈ ಹಿಂದೆಯೇ ಯುವತಿ ದೂರು ನೀಡಿದ್ದಳಿ. ಅಲ್ಲದೆ, ರೇಪ್ ಕೇಸ್ ನಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಹಾದಿ ತಪ್ಪಿಸುವ ಹುನ್ನಾರ ನಡೆಸಲಾಗಿದೆ ಎಂದು ಯುವತಿ ಆರೋಪಿಸಿದ್ದಾಳೆ. ಅಲ್ಲದೆ, ಎಫ್ ಐಆರ್ ರದ್ದುಪಡಿಸಬೇಕು ಮತ್ತು ಆತ ಸಲ್ಲಿಸಿರುವ ದೂರಿನ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುವಂತೆ ಯುವತಿ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದಾಳೆ.
ಇತ್ತ ಯುವತಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮಾಜಿ ಸಚಿವ ಜಾರಕಿಹೊಳಿ ಮತ್ತು ಎಸ್ ಐಟಿಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಯನ್ನು ಜೂನ್ 21ಕ್ಕೆ ಮುಂದೂಡಿದೆ.