ಮಂಡ್ಯ, ಜೂ.14 (DaijiworldNews/HR): ಕರ್ನಾಟಕದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ಎಳೆದು ತರುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜೆಡಿಎಸ್ ಹಾಗೂ ದೇವೇಗೌಡರನ್ನು ಎರಡೂ ರಾಷ್ಟ್ರೀಯ ಪಕ್ಷಗಳು ಹಲವಾರು ವರ್ಷಗಳಿಂದ ದುರ್ಬಳಕೆ ಮಾಡಿಕೊಂಡಿದ್ದು, ಕೊರೊನಾ ಸಮಯವಲ್ಲಿ ರಾಜಕೀಯ ಮಾಡಬಾರದು ಎಂದು ಮೌನವಾಗಿದ್ದೇವೆ. ಮುಂದಿನ ದಿನಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ದ ಹೋರಾಟ ಮಾಡಲಾಗುವುದು" ಎಂದರು.
ಇನ್ನು ರಾಜ್ಯದಲ್ಲಿ ಯಾರು ಮುಖ್ಯಮಂತ್ರಿಯಾಗಿ ಇರುತ್ತಾರೋ ಅದು ನಮಗೆ ಸಂಬಂಧವಿಲ್ಲದ ವಿಷಯವಾಗಿದ್ದು, ನಾಡಿನ ರಕ್ಷಣೆ ಮಾಡುವುದರ ಕಡೆ ಅಧಿಕಾರದಲ್ಲಿರುವವರು ಗಮನ ಕೊಡಬೇಕು. ಕೊರೊನಾವನ್ನು ನಿಯಂತ್ರಿಸಲು ಸರ್ಕಾರ ಕ್ರಮ ವಹಿಸಬೇಕು" ಎಂದಿದ್ದಾರೆ.
ಬೆಲೆ ಏರಿಕೆ ಕುರಿತು ಮಾತನಾಡಿದ ಅವರು, "ಸರ್ಕಾರದ ಖಜಾನೆ ತುಂಬಿಸುವುದಕ್ಕೆ ಬೆಲೆ ಏರಿಕೆ ಮಾಡಲಾಗಿದ್ದು, ಪೆಟ್ರೋಲ್, ಡಿಸೇಲ್ ದರ ದಿನನಿತ್ಯ ಏರುತ್ತಲೇ ಇದೆ. ಕಾಂಗ್ರೆಸ್ ನಾಯಕರು ಪೆಟ್ರೋಲ್ ಬಂಕ್ಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ 32 ರೂ. ಇದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲಿಯಂ ಮೇಲೆ 68 ರೂ. ಸೆಸ್ ವಿಧಿಸುತ್ತಿದೆ. ಈ ಸೆಸ್ ಕಡಿತ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.