ನವದೆಹಲಿ, ಜೂ 14 (DaijiworldNews/PY): "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆಂದು ಭಕ್ತರು ನೀಡಿರುವ ದೇಣಿಗೆಯನ್ನು ದುರುಪಯೋಗ ಮಾಡಿಕೊಳ್ಳುವುದು ಭಕ್ತರ ನಂಬಿಕೆಗೆ ಮಾಡಿದ ಅವಮಾನ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೋಟ್ಯಂತರ ಮಂದಿ ದೇವರ ಮೇಲಿನ ನಂಬಿಕೆ ಹಾಗೂ ಭಕ್ತಿಯಿಂದ ದೇವರ ಪಾದದಲ್ಲಿ ತಮ್ಮ ಕಾಣಿಗೆಯನ್ನು ಅರ್ಪಣೆ ಮಾಡಿದ್ದಾರೆ. ಭಕ್ತರು ನೀಡಿದ ದೇಣಿಗೆ ಹಣವನ್ನು ದುರುಪಯೋಗ ಮಾಡಿಕೊಳ್ಳುವುದು ಅಧರ್ಮ, ಪಾಪ. ಇದು ಭಕ್ತರ ನಂಬಿಕೆಗೆ ಮಾಡಿದ ಅವಮಾನ" ಎಂದಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಜಮೀನು ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂದು ಆಮ್ ಆದ್ಮಿ ಪಕ್ಷ ಮತ್ತು ಸಮಾಜವಾದಿ ಪಕ್ಷ ಭಾನುವಾರ ಭ್ರಷ್ಟಾಚಾರದ ಆರೋಪ ಮಾಡಿತ್ತು.
"ಎರಡು ಕೋಟಿ ಬೆಲೆ ಬಾಳುವ ಈ ಜಮೀನನ್ನು 18.5 ಕೋಟಿಗೆ ಖರೀದಿ ಮಾಡಲಾಗಿದೆ" ಎಂದು ಎಎಪಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಪವನ್ ಪಾಂಡೆ ಆರೋಪಿಸಿದ್ದರು.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಈ ಆರೋಪಗಳನ್ನು ತಳ್ಳಿ ಹಾಕಿದ್ದರು.