ಹೈದರಾಬಾದ್, ಜೂ 14 (DaijiworldNews/PY): ತೆಲಂಗಾಣದ ಮಾಜಿ ಸಚಿವ ಈಟೆಲಾ ರಾಜೇಂದರ್ ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ಈಟೆಲಾ ರಾಜೇಂದರ್ ಅವರೊಂದಿಗೆ ಇಂದು ಮಾಜಿ ಶಾಸಕ ಎನುಗು ರವೀಂದರ್ ರೆಡ್ಡಿ ಸೇರಿದಂತೆ ಮಾಜಿ ಟಿಎಸ್ಆರ್ಟಿಸಿ ನೌಕರರ ಸಂಘಗಳು ಜೆಎಸಿ ಅಧ್ಯಕ್ಷ ಅಶ್ವಥಮಾ ರೆಡ್ಡಿ, ಮಾಜಿ ಸಂಸದ ರಮೇಶ್ ರಾಥೋಡ್, ಕಂಟೋನ್ಮೆಂಟ್(ಹೈದರಾಬಾದ್) ಉಪಾಧ್ಯಕ್ಷ ಸದಾ ಕೇಶವ್ ರೆಡ್ಡಿ, ಮಾಜಿ ಟಿಆರ್ಎಸ್ ಮಹಿಲಾ ಅಧ್ಯಕ್ಷ ತುಲಾ ಉಮಾ, ನಳಿನಿ, ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಮುಖಂಡರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಈಟೆಲಾ ರಾಜೇಂದರ್ ಅವರು ಕೆಲ ದಿನಗಳ ಹಿಂದೆ ಹುಜುರಾಬಾದ್ ಶಾಸಕ ಸ್ಥಾನಕ್ಕೆ ಹಾಗೂ ತೆಲಂಗಾಣ ರಾಷ್ಟ್ರೀಯ ಸಮಿತಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.
ರಾಜೇಂದರ್ ಅವರು ಟಿಆರ್ಎಸ್ನಲ್ಲಿ ಹಿರಿಯ ನಾಯಕರಾಗಿದ್ದರು. ಅವರು ಕೆ.ಚಂದ್ರಶೇಖರ್ ಅವರ ಸರ್ಕಾರದಲ್ಲಿ ಸಚಿವರಾಗಿ ಹಣಕಾಸು, ಆರೋಗ್ಯ ಸೇರಿದಂತೆ ಪ್ರಮುಖ ಖಾತೆಗಳನ್ನು ನಿಭಾಯಿಸಿದ್ದರು. ರಾಜೇಂದರ್ ವಿರುದ್ದ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಆರೋಪಗಳು ಕೇಳಿ ಬಂದ ಕಾರಣ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.
ಸಂಸದ ಧರ್ಮಪುರಿ ಅರವಿಂದ್, ಸಂಸದ ಸೋಯಂ ಬಾಪುರಾವ್, ಶಾಸಕ ಎಂ.ರಘುನಂದನ್ ರಾವ್, ಜಿ ಪ್ರೀಮಂದರ್ ರೆಡ್ಡಿ ಸೇರಿದಂತೆ ತೆಲಂಗಾಣ ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.