ಬೆಂಗಳೂರು, ಜೂ.14 (DaijiworldNews/HR): "ಬಿಜೆಪಿ ಪಕ್ಷದಲ್ಲಿ ಎರಡು ಗುಂಪುಗಳಿದ್ದು, ಅವುಗಳ ನಡುವೆ ಎತ್ತಿಕಟ್ಟಿ ಮೂರನೆಯವರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಫಂಡಿಂಗ್ಗಾಗಿ ಬಿಜೆಪಿಯವರೇ ಶಾಸಕರನ್ನು ಎತ್ತಿಕಟ್ಟಿ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲ್ ಮಾಡಿ ವಸೂಲಿ ಮಾಡಿಕೊಳ್ಳುತ್ತಿದ್ದಾರೆ" ಎಂದು ದಿನೇಶ್ ಗುಂಡುರಾವ್ ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಫಂಡಿಂಗ್ ಹಣ ತುಲುಪಿದರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ನೀವೆ ಮುಂದುವರೆಯಿರಿ ಎಂದು ಹೈಕಮಾಂಡ್ ಹೇಳುತ್ತದೆ. ಬಿಜೆಪಿಯಲ್ಲಿನ ಗುಂಪುಗಾರಿಕೆ ಅಥವಾ ನಾಯಕತ್ವ ಬದಲಾವಣೆ ಚರ್ಚೆಗಳು ಫಂಡಿಂಗಾಗಿ ನಡೆಯುತ್ತಿರುವ ಬ್ಲಾಕ್ ಮೇಲ್ ತಂತ್ರಗಳಷ್ಟೆ" ಎಂದಿದ್ದಾರೆ.
ಇನ್ನು ಮೋದಿ ಸರ್ಕಾರ ಉದ್ಯಮಿಗಳ, ಶ್ರೀಮಂತರ ಹಿಡಿತಕ್ಕೆ ಸಿಲುಕಿದ್ದು, ಅವರು ಹೇಳಿದಂತೆ ಕೇಳುವ ಸ್ಥಿತಿಗೆ ತಲುಪಿದೆ, ಬಡವರ ಬಗ್ಗೆ ಯೋಚಿಸುವ ಹೃದಯವಂತಿಕೆ ಪ್ರಧಾನಿ ಅವರಿಗಿಲ್ಲವಾಗಿದೆ. ಶ್ರೀಮಂತರ ಆಸ್ತಿ ಶೇ.35ರಷ್ಟು ಹೆಚ್ಚಾಗಿದೆ. ರೈತರು, ಕಾರ್ಮಿಕರು, ಸೇವಾವಲಯದಲ್ಲಿರುವವರ ಆದಾಯ ತೀವ್ರವಾಗಿ ಕುಸಿದಿದೆ" ಎಂದು ಕಿಡಿಕಾರಿದ್ದಾರೆ.
ಸರ್ಕಾರವು ಕೊರೊನಾದಂತಹ ಸಮಯದಲ್ಲಿ ವಿದ್ಯುತ್ ದರ ಹೆಚ್ಚಳವನ್ನು ಮಾಡುತ್ತಿರುವುದು ಸರಿಯಲ್ಲ, ಲಾಕ್ಡೌನ್ನಿಂದ ಹೊರಗೆ ಓಡಾಡಲು ಸಾಧ್ಯವಿಲ್ಲ. ಮನೆಯಲ್ಲಿ ಕುಳಿತು ಟಿವಿ ನೋಡಿದರೂ ಹೆಚ್ಚುವರಿ ವಿದ್ಯುತ್ ಬಿಲ್ ಕಟ್ಟಬೇಕು ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ರಾಜ್ಯ ಸರ್ಕಾರ ಕೂಡಲೇ ದರ ಹೆಚ್ಚಳವನ್ನು ಕೈ ಬಿಡಬೇಕು" ಎಂದು ಒತ್ತಾಯಿಸಿದ್ದಾರೆ.