ಬೆಂಗಳೂರು, ಜೂ 14 (DaijiworldNews/PY): "ಪಕ್ಷದ ತೀರ್ಮಾನಕ್ಕೆ ಬದ್ದರಾಗಿರಬೇಕು. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ" ಎಂದು ಪಕ್ಷದೊಳಗಿನ ಅಸಮಾಧಾನದ ಬಗ್ಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಒಂದು ಮನೆಯಲ್ಲಿ ಹತ್ತು ಮಕ್ಕಳು ಇದ್ದಾರೆ ಎಂದು ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಿಲ್ಲ. ಎಲ್ಲರೂ ಕೂಡಾ ಪಕ್ಷದ ತೀರ್ಮಾನಕ್ಕೆ ಬದ್ದರಾಗಿರಬೇಕು" ಎಂದಿದ್ದಾರೆ.
"ಜೂನ್ 16ರಂದು ಸಂಜೆ 5 ಗಂಟೆಗೆ ಸಭೆ ಇದೆ. ನೀವೆಲ್ಲರೂ ಪಾಲ್ಗೊಳ್ಳಬೇಕು ಎಂದು ನಮ್ಮನ್ನು ಕರೆದಿದ್ದಾರೆ. ಸಭೆಯಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆ ನಡೆಯುತ್ತದೆ ಎಂದು ತಿಳಿದಿಲ್ಲ" ಎಂದು ಹೇಳಿದ್ದಾರೆ.
ಸಿಎಂ ಬದಲಾವಣೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಸಿಎಂ ಬದಲಾವಣೆ ವಿಚಾರದ ಬಗ್ಗೆ ಯಾವುದೇ ರೀತಿಯಾದ ಪ್ರಸ್ತಾಪವಿಲ್ಲ. ಮುಂದಿನ ಎರಡು ವರ್ಷ ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿಗಳು. ಈ ವಿಚಾರದ ಬಗ್ಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸ್ಪಷ್ಟಪಡಿಸಿದ್ದಾರೆ" ಎಂದಿದ್ದಾರೆ.
"ಮೊದಲು ಪಕ್ಷದ ನಿರ್ಧಾರಕ್ಕೆ ಬದ್ದರಾಗಿರುವುದು ಮುಖ್ಯ. ಇಲ್ಲಿ ಯಾರೂ ದೊಡ್ಡವರು ಎಂದಿಲ್ಲ" ಎಂದು ಹೇಳಿದ್ದಾರೆ.