ಬೆಂಗಳೂರು, ಜೂ 14(DaijiworldNews/MS): ಅನಧಿಕೃತ ಟೆಲಿಫೋನ್ ಎಕ್ಸ್ಚೇಂಜ್ ವ್ಯವಸ್ಥೆಯ ಮೂಲಕ ಅಂತರರಾಷ್ಟ್ರೀಯ ಕರೆಗಳನ್ನು (ಐಎಸ್ಡಿ) ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ, ದೂರಸಂಪರ್ಕ ಇಲಾಖೆಗೆ ವಂಚಿಸುತ್ತಿದ್ದ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದರು ಎನ್ನಲಾದ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಮಿಲಿಟರಿ ಇಂಟಲಿಜೆನ್ಸ್ ಸಹಕಾರದೊಂದಿಗೆ ಸಿಸಿಬಿಯ ‘ಭಯೋತ್ಪಾದನೆ ನಿಗ್ರಹ ದಳ’ದಬಿಟಿಎಂ ಬಡಾವಣೆಯಲ್ಲಿ ಕಾರ್ಯಾಚರಣೆ ನಡೆಸಿ, ಕೇರಳದ ಇಬ್ರಾಹಿಂ ಪುಲ್ಲಟ್ಟಿ (36) ಹಾಗೂ ತಮಿಳುನಾಡಿನ ಗೌತಮ್ (27) ಎಂಬುವರನ್ನು ಬಂಧಿಸಿದ್ದರು. ಅವರಿಂದ 900 ಸಿಮ್ ಕಾರ್ಡ್ ಸಮೇತ ಎಫ್ಸಿಟಿ (ಫಿಕ್ಸೆಡ್ ಸೆಲ್ಯುಲರ್ ಟರ್ಮಿನಲ್) ಬಾಕ್ಸ್ ಜಪ್ತಿ ಮಾಡಿದ್ದಾರೆ.
ಆರೋಪಿಗಳು ಒಂದೇ ಬಾರಿಗೆ 32 ಸಿಮ್ ಕಾರ್ಡ್ಗಳನ್ನು ಬಳಸುವ 30 ಸಿಮ್ ಬಾಕ್ಸ್ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಿಟಿಎಂ ಬಡಾವಣೆಯ ಆರು ಸ್ಥಳಗಳಲ್ಲಿ ಅಳವಡಿಸಿಕೊಂಡಿದ್ದರು, ಸುಮಾರು 900ಕ್ಕೂ ಹೆಚ್ಚು ಸಿಮ್ ಕಾರ್ಡ್ಗಳನ್ನು ಬಳಸಿ, ಅನಧಿಕೃತವಾಗಿ 'ಯುಎಇ, ಪಾಕಿಸ್ತಾನ ಹಾಗೂ ಇತರೆ ದೇಶಗಳಿಂದ ಬರುತ್ತಿದ್ದ ಐಎಸ್ಡಿ ಕರೆಗಳನ್ನು ಆರೋಪಿಗಳು ಸ್ಥಳೀಯ ಕರೆಗಳನ್ನಾಗಿ ಮಾರ್ಪಡಿಸುತ್ತಿದ್ದರು. ಇದಕ್ಕೆ ಅಗತ್ಯವಾದ ಸ್ಥಳೀಯ ವಿಳಾಸದ ಸಿಮ್ ಕಾರ್ಡ್ಗಳು ಕೋರಿಯರ್ ಮೂಲಕ ಆರೋಪಿಗಳ ಕೈಗೆ ಸಿಗುತ್ತಿದ್ದವು. ಕೋರಿಯರ್ ಕಳುಹಿಸುತ್ತಿದ್ದ ಇಬ್ಬರು ಸೇರಿ ನಾಲ್ವರಿಂದ ಸಿಸಿಬಿ ಮಾಹಿತಿ ಕಲೆಹಾಕುತ್ತಿದೆ' ಎಂದು ಮೂಲಗಳು ಹೇಳಿವೆ.
'ಬಂಧಿತ ಆರೋಪಿಗಳು ವಾಸವಿದ್ದ ಮನೆ ಹಾಗೂ ಕೃತ್ಯಕ್ಕಾಗಿ ಬಾಡಿಗೆ ಪಡೆದಿದ್ದ ಮನೆಗಳಲ್ಲಿ ಪರಿಶೀಲನೆ ನಡೆಸಲಾಗಿದೆ. ಸಿಮ್ಕಾರ್ಡ್ಗಳು, ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ' ಎಂದು ತಿಳಿದುಬಂದಿದೆ