ಬೆಂಗಳೂರು, ಜೂ 14 (DaijiworldNews/PY): ಬೈಕ್ ಅಪಘಾತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ನಟ ವಿಜಯ್ ಅವರನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳಿಗೆ ಗಂಭೀರ ಗಾಯಗಳಾಗಿ ನಿಷ್ಕ್ರಿಯಗೊಂಡಿದೆ ಎಂದು ಆಸ್ಪತ್ರೆ ವೈದ್ಯ ಡಾ ಅರುಣ್ ನಾಯ್ಕ್ ತಿಳಿಸಿದ್ದಾರೆ.
ಆಸ್ಪತ್ರೆ ವೈದ್ಯ ಡಾ ಅರುಣ್ ನಾಯ್ಕ್ ಮಾಧ್ಯಮಗಳ ಮುಂದೆ ಪ್ರತಿಕ್ರಿಯೆ ನೀಡಿದ್ದು, ಅಪಘಾತವಾದ ಸಂದರ್ಭ ಅವರನ್ನು ಆಸ್ಪತ್ರೆಗೆ ಕರೆತಂದ ಸಂದರ್ಭ ಅವರು ಸಂಪೂರ್ಣ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದರು. ಅವರು ಉಸಿರಾಡುತ್ತಿದ್ದ ಕಾರಣ ಸಿಟಿ ಸ್ಕ್ಯಾನ್ ಮಾಡಿದ ಸಂದರ್ಭ ಅವರ ಮೆದುಳಿನ ಬಲಭಾಗಕ್ಕೆ ತೀವ್ರ ಏಟಾಗಿದ್ದು, ಮೆದುಳಿನ ಒಳಗೆ ರಕ್ತಸ್ರಾವವಾಗುತ್ತಿತ್ತು. ಹಾಗಾಗಿ ಅವರ ಕುಟುಂಬಸ್ಥರೊಂದಿಗೆ ಮಾತುಕತೆ ನಡೆಸಿ ಸರ್ಜರಿ ಮಾಡಲು ತೀರ್ಮಾನಿಸಿದ್ದು, ಬೆಳಗ್ಗೆ 4.30ಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದಿದ್ದಾರೆ.
ಮೆದುಳು ನಿಷ್ಕ್ರಿಯಗೊಂಡಲ್ಲಿ ಪುನಃ ಚೇತರಿಕೆಯಾಗುವ ಸಾಧ್ಯತೆ ಕಡಿಮೆ. ವಿಜಯ್ ಅವರಿಗೆ ಎಲ್ಲಾ ರೀತಿಯಾದ ಚಿಕಿತ್ಸೆ ನೀಡುತ್ತಿದ್ದರೂ ಅವರು ಸ್ಪಂದಿಸುತ್ತಿಲ್ಲ. ರಕ್ತದೊತ್ತಡದಲ್ಲೂ ಸಾಕಷ್ಟು ಏರಿಳಿತವಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಅವರ ದೇಹದಲ್ಲಿ ಇತರೆ ಚಟುವಟಿಕೆಗಳು ನಡೆಯುತ್ತಿವೆ. ಆದರೆ ಮೆದುಳಿನ ಚಟುವಟಿಕೆ ನಡೆಯುತ್ತಿಲ್ಲ ಎಂದ ವೈದ್ಯರು ಹೇಳಿದ್ದಾರೆ.
ವಿಜಯ್ ಅವರ ಸಹೋದರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ವೈದ್ಯರು ಹೇಳುತ್ತಿರುವುದು ನೋಡಿದರೆ ಚೇತರಿಕೆ ಕಷ್ಟ ಎಂದೆನಿಸುತ್ತದೆ. ಅಣ್ಣ ಸದಾ ಸಮಾಜದ ಒಳಿತಿಗಾಗಿ ಶ್ರಮಿಸುತ್ತಿದ್ದರು, ಹಾಗಾಗಿ ಅವರ ಅಂಗಾಗ ದಾನ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
ಜೂನ್ 12ರ ಶನಿವಾರದಂದು ರಾತ್ರಿ ಗೆಳೆಯನ ಮನೆಯಿಂದ ವಾಪಾಸ್ಸಾಗುತ್ತಿದ್ದ ಸಂದರ್ಭ ಬನ್ನೇರುಘಟ್ಟದ ರಸ್ತೆಯ ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿದ್ದು, ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿತ್ತು. ಪರಿಣಾಮ ನಟ ಬೈಕ್ನಿಂದ ಕೆಳಗೆಬಿದ್ದಿದ್ದು, ಗಂಭೀರ ಗಾಯಗೊಂಡಿದ್ದರು.
ವಿಜಯ್ ಅವರು ಮೂಲತಃ ರಂಗಭೂಮಿ ಕಲಾವಿದರಾಗಿದ್ದು, ನಾನು ಅವನಲ್ಲ, ಅವಳಲ್ಲ ಸಿನಿಮಾ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದ್ದು, ಒಗ್ಗರಣೆ, ಕೃಷ್ಣ ತುಳಸಿ, ವಿಲನ್, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಕಿಲ್ಲಿಂಗ್ ವೀರಪ್ಪನ್, ಅಲ್ಲಮ ಮುಂತಾದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ವಿಜಯ್ ಕೆಲವು ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದರು.