ಕೊಚ್ಚಿ, ಜೂ.14 (DaijiworldNews/HR): ಮಹಿಳೆಯರು ಬೈಕ್, ಕಾರು, ರಿಕ್ಷಾಗಳು, ವಿಮಾನ ಓಡಿಸುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬಳು 24 ವರ್ಷದ ಕೇರಳದ ಯುವತಿ ವಿಶೇಷ ಎಂಬಂತೆ ದಿನಾ ಬರೋಬ್ಬರಿ 300 ಕಿಮೀ ಟ್ಯಾಂಕರ್ ಓಡಿಸುತ್ತಿದ್ದಾಳೆ.
ತ್ರಿಶೂರ್ ಜಿಲ್ಲೆಯ ಡೆಲಿಸಿಯಾ ಡೇವಿಸ್ ಎಂಬ ಯುವತಿ ಅಗ್ನಿಶಾಮಕ ಮತ್ತು ಸುರಕ್ಷತಾ ಪರವಾನಗಿಯೊಂದಿಗೆ ಅಪಾಯಕಾರಿ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಓಡಿಸಲು ಕೇರಳದಲ್ಲಿ ಪರವಾನಗಿ ಹೊಂದಿರುವ ಏಕೈಕ ಮಹಿಳೆ ಈಕೆಯಾಗಿದ್ದಾರೆ.
ಪೆಟ್ರೋಲ್ ಟ್ಯಾಂಕರ್ ಚಾಲಕ ಡೇವಿಸ್ ಅವರ ಮೂವರು ಪುತ್ರಿಯರಲ್ಲಿ ಡೆಲಿಸಿಯಾ ಎರಡನೇಯವಳಾಗಿದ್ದು, ಡೇವಿಸ್ ಕಳೆದ 42 ವರ್ಷಗಳಿಂದ ಪೆಟ್ರೋಲ್ ಟ್ಯಾಂಕರ್ ಲಾರಿಗಳನ್ನು ಓಡಿಸುತ್ತಿದ್ದು, ತನ್ನ ಚಿಕ್ಕ ವಯಸ್ಸಿನಲ್ಲಿಯೇ ಡೆಲಿಸಿಯಾ ಲಾರಿ ಚಾಲನೆ ಮಾಡುವ ಉತ್ಸಾಹ ಹೊಂದಿದ್ದು, ತಂದೆ ಡೇವಿಸ್ ಡೆಲಿಸಿಯಾವನ್ನು ತಮ್ಮ ಜತೆ ಕರೆದೊಯ್ಯುತ್ತಿದ್ದರು.
ಇನ್ನು ತಂದೆ ವಾಹನವನ್ನು ಚಲಾಯಿಸುವ ರೀತಿ ನೋಡುತ್ತಲೇ ಡೆಲಿಸಿಯಾ ಬೆಳೆದಿದ್ದು, ತಂದೆಯ ಸಹಾಯದಿಂದ ಮೊದಲ ಬಾರಿಗೆ ಡೆಲಿಸಿಯಾ ಎಂಟನೇ ತರಗತಿಯಲ್ಲಿದ್ದಾಗ ಕಾರು ಓಡಿಸಿದ್ದು, ಆ ಬಳಿಕದ ಡ್ರೈವಿಂಗ್ ಆಸಕ್ತಿ ಈಗ ದೊಡ್ಡ ವಾಹನಗಳನ್ನು ಓಡಿಸುವ ಹಂತಕ್ಕೆ ತಲುಪಿದೆ.
ಡೆಲಿಸಿಯಾ ಎರ್ನಾಕುಲಂನ ಇರುಂಪಾನಂನಿಂದ ಮಲಪ್ಪುರಂನ ಪೆಟ್ರೋಲ್ ಪಂಪ್ವರೆಗೆ ಪೆಟ್ರೋಲ್ ತುಂಬಿದ ಟ್ಯಾಂಕರ್ ಟ್ರಕ್ ಅನ್ನು ಓಡಿಸುತ್ತಾರೆ. ಕೆಲವೊಮ್ಮೆ, ಕಲ್ಲಿಕೋಟೆ, ಎಲಾಥೂರ್ ನಲ್ಲಿರುವ ದೂರ ದೂರದ ಪೆಟ್ರೋಲ್ ಡಿಪೋಗೆ ಕೂಡ ಹೋಗಬೇಕಾಗುತ್ತದೆ.
ಡೆಲಿಸಿಯಾ ತ್ರಿಶೂರ್ ಸೇಂಟ್ ಥಾಮಸ್ ಕಾಲೇಜಿನಲ್ಲಿ ಬಿ.ಕಾಮ್ ಪದವಿ ಪಡೆದಿದ್ದು, ಎಂ.ಕಾಮ್ ವಿದ್ಯಾಭ್ಯಾಸ ಮುಗಿಸಿದ್ದಾರೆ.
ಇನ್ನು ಮಲ್ಟಿ-ಆಕ್ಸಲ್ ವಾಹನಗಳನ್ನು ಓಡಿಸುವುದು ನನ್ನ ಮುಂದಿನ ಗುರಿಯಾಗಿದ್ದು, ಬೃಹತ್ ಮಲ್ಟಿ-ಆಕ್ಸಲ್ ವಾಹನಗಳನ್ನು ಓಡಿಸಲು ಬೆಂಗಳೂರಿನಲ್ಲಿ ತರಬೇತಿ ಪಡೆಯಬೇಕು ಎಂದು ನಿರ್ಧರಿಸಿರುವುದಾಗಿ ಡೆಲಿಸಿಯಾ ತಿಳಿಸಿದ್ದಾಳೆ.