ಬೆಂಗಳೂರು, ಜೂ.14 (DaijiworldNews/HR): "ಕೊರೊನಾದಂತಹ ಸಮಯದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಹಣದಲ್ಲಿ ಜನರಿಗೆ ಸಹಾಯ ಮಾಡಲು ಹೋದರೆ ಪೊಲೀಸ್ ಅಧಿಕಾರಿಗಳು ಈ ಬೋರ್ಡ್ಗಳನ್ನು ಕಿತ್ತು ಹಾಕಿಸಿದ್ದು, ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ, ತಮ್ಮ ಸ್ಟಾರ್ ತೆಗೆದು ಅದನ್ನು ಹಾಕಿಕೊಳ್ಳಲಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೊರೊನಾದಂತಹ ಕಷ್ಟದ ಕಾಲದಲ್ಲಿ ನೆರವು ವಿತರಣೆ ಕಾರ್ಯಕ್ರಮ ನಿಲ್ಲಿಸಿದರೆ ಜನರನ್ನು ಕರೆದುಕೊಂಡು ಬಂದು ನಿಮ್ಮ ಪೊಲೀಸ್ ಠಾಣೆ ಮುಂದೆ ಧರಣಿ ಮಾಡುತ್ತೇನೆ ಎಂದು ಹೇಳಿದೆ. ನಾವು ನ್ಯಾಯಾಲಯಕ್ಕೆ ಗೌರವ ಕೊಡುತ್ತೇವೆ. ಆದರೆ ನಿಮ್ಮ ಕೇಸ್ಗಳಿಗೆ ಹೆದರುವ ಮಕ್ಕಳು ಕಾಂಗ್ರೆಸ್ನವರಲ್ಲ. ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿಯ ಬ್ಯಾಡ್ಜ್ ಮತ್ತು ಬಾವುಟ ಕೊಡಿ. ಅವರು ತಮ್ಮ ಸ್ಟಾರ್ ತೆಗೆದು ಬಿಜೆಪಿ ಬ್ಯಾಡ್ಜ್ ಹಾಕಿಕೊಳ್ಳಲಿ" ಎಂದರು.
ಇನ್ನು ನಿಮ್ಮಿಂದಾಗುವುದಾದರೆ ಬಡವರಿಗೆ ನೆರವಾಗಿ. ಅದನ್ನು ಬಿಟ್ಟು ಕಷ್ಟದ ಸಮಯದಲ್ಲಿ ಬಡವರಿಗೆ ನೆರವಾಗುವುದನ್ನು ತಡೆಯುತ್ತೀರಲ್ಲ ನೀವು ಮನುಷ್ಯರಾ ಅಥವಾ ದನಗಳಾ? ಮಂತ್ರಿ, ಶಾಸಕ ಹೇಳಿದ ಮಾತ್ರಕ್ಕೆ ಕಾಂಗ್ರೆಸ್ ಬಾವುಟ ಕಿತ್ತು ಹಾಕಲು ಬಂದಿದ್ದೀರಾ. ಕಾಂಗ್ರೆಸ್ ಬಾವುಟ ಕಿತ್ತು ಹಾಕಲು ಅವರ ಹಣೆಯಲ್ಲಿ ಬರೆದಿಲ್ಲ.ಸರ್ಕಾರದ ಕಿಟ್ ಗೆ ತಮ್ಮ ಫೋಟೋ ಹಾಕಿಕೊಂಡು ಬಿಜೆಪಿ ನಾಯಕರು ಹಂಚುವಾಗ ಈ ಪೊಲೀಸ್ ಅಧಿಕಾರಿಗಳು ಎಲ್ಲಿದ್ದರು? ಮಲಗಿದ್ದರಾ? ಮಾನ ಮರ್ಯಾದೆ ಇದ್ದರೆ ಬಡವರ ಪರಿಸ್ಥಿತಿ ಅರ್ಥ ಮಾಡಿಕೊಳ್ಳಿ" ಎಂದು ಪೊಲೀಸರ ವಿರುದ್ಧ ಹರಿಹಾಯ್ದಿದ್ದಾರೆ.
ಪೊಲೀಸರು ನಿಮ್ಮ ಕಾನ್ಸ್ಟೇಬಲ್ ಗಳಿಗೆ ಹಾಯ ಮಾಡಿದ್ದೀರಾ? ಎಂದು ಪ್ರಶ್ನಿಸಿರುವ ಅವರು, "ಜನರಿಗೆ ನಮ್ಮ ನಾಯಕರು ಸಹಾಯ ಮಾಡುತ್ತಿದ್ದಾರೆ. ಅವರಿಗೆ ಯಾವುದೇ ಲಂಚ, ಸಂಬಳ ಇಲ್ಲ ಆದರೂ ತಮ್ಮ ಹಣದಲ್ಲಿ ನೀಡುತ್ತಿದ್ದಾರೆ" ಎಂದರು.