ಶಿವಮೊಗ್ಗ, ಜೂ 14 (DaijiworldNews/PY): "ಸಿದ್ದರಾಮಯ್ಯ, ಜಮೀರ್ ಅಹ್ಮದ್, ದಿಗ್ವಿಜಯ್ ಸಿಂಗ್ ಈ ಮೂವರೂ ಕೂಡಾ ಪಾಕಿಸ್ತಾನ ಪರ ವ್ಯಕ್ತಿಗಳು" ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಮತ್ತೆ ಆಧಿಕಾರಕ್ಕೇರಿದಲ್ಲಿ ಜಮ್ಮು-ಕಾಶ್ಮೀರ ಮುಂದೆ ಹೇಗಿತ್ತೋ ಹಾಗೇ ಮಾಡುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಎನ್ನುತ್ತಾರೆ. ಗೋವನ್ನು ಪೂಜಿಸುತ್ತೇವೆ. ಆದರೆ, ವಯಸ್ಸಾದ ಗೋವನ್ನು ವಧೆ ಮಾಡಿದರೆ ಏನು ತಪ್ಪು ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇನ್ನು ಜಮೀರ್ ಅಹ್ಮದ್ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಬೆಂಬಲಿಸುತ್ತೇನೆ ಎನ್ನುತ್ತಾರೆ. ಈ ಮೂವರೂ ಕೂಡಾ ಪಾಕಿಸ್ತಾನ ಪರ ವ್ಯಕ್ತಿಗಳು" ಎಂದು ಕಿಡಿಕಾರಿದ್ದಾರೆ.
"ಕೈ ಪಕ್ಷದಲ್ಲಿ ಯಾರು ಏನು ಬೇಕಾದರೂ ಹೇಳಿಕೆ ನೀಡಬಹುದು. ಏಕೆಂದರೆ, ಆ ಪಕ್ಷದಲ್ಲಿ ಹೇಳೋರು ಕೇಳೋರು ಯಾರು ಇಲ್ಲ. ಆದರೆ, ಬಿಜೆಪಿ ಹಾಗಲ್ಲ. ಬಿಜೆಪಿ ಹೇಳೋರು, ಕೇಳೋರು ಇರುವ ಪಕ್ಷ. ಇತ್ತೀಚಿನ ಬೆಳವಣಿಗೆ ಬಗ್ಗೆ ಕಾರ್ಯಕರ್ತರಲ್ಲಿ ಒಂದಷ್ಟು ಗೊಂದಲಗಳಿವೆ. ಬೆಂಗಳೂರಿಗೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡುತ್ತಿದ್ದಾರೆ. ಅವರ ಭೇಟಿಯ ಬಳಿಕ ಪಕ್ಷದಲ್ಲಿ ಮೂಡಿರುವ ಎಲ್ಲಾ ಗೊಂದಲಗಳಿಗೆ ನಿವಾರಣೆಯಾಗಲಿವೆ" ಎಂದಿದ್ದಾರೆ.
"ಬಿಜೆಪಿ ಪಕ್ಷದಲ್ಲಿ ಸಹಿ ಸಂಗ್ರಹ ಪದ್ದತಿ ಇಲ್ಲ. ರೇಣುಕಾಚಾರ್ಯ, ಸಿ.ಪಿ.ಯೋಗೇಶ್ವರ ಅವರಿಗೆ ಸಹಿಸಂಗ್ರಹ ಮಾಡಬಾರದು. ನಾಯಕತ್ವದ ಬದಲಾವಣೆ ವಿಚಾರವಾಗಿ ಯಾರೂ ಕೂಡಾ ಬಹಿರಂಗವಾದ ಹೇಳಿಕೆ ನೀಡಬಾರದು ಎಂದು ಪಕ್ಷದ ವರಿಷ್ಠರು ಸೂಚಿಸಿದ್ದಾರೆ. ನಿಮ್ಮ ಅಭಿಪ್ರಾಯಗಳನ್ನು ಪಕ್ಷದ ಚೌಕಟ್ಟಿನಲ್ಲಿ ತಿಳಿಸಿ ಎಂದಿದ್ದಾರೆ. ನಾವು ಅದೇ ರೀತಿ ನಡೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.