ನವದೆಹಲಿ, ಜೂ 14 (DaijiworldNews/PY): ಕೊರೊನಾ ಸಮಯದಲ್ಲಿ ಹಿರಿಯ ನಾಗರಿಕರಿಗೆ ಭಾವನಾತ್ಮಕ ಬೆಂಬಲ ಸೇರಿದಂತೆ ಆರೋಗ್ಯ ಹಾಗೂ ಕಾನೂನು ನೆರವು ನೀಡುವ ಸಲುವಾಗಿ ಯೋಗಿ ಆದಿತ್ಯನಾಥ್ ಕೈಗೊಂಡಿರುವ ಕ್ರಮಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ಹಿರಿಯ ನಾಗರಿಕರಿಗಾಗಿ ಆರೋಗ್ಯ ಹಾಗೂ ಕಾನೂನು ನೆರವು ನೀಡಲು ಯೋಗಿ ಆದಿತ್ಯನಾಥ್ ಅವರು ಕೈಗೊಂಡ ಕ್ರಮ ಅತ್ಯುತ್ತಮವಾಗಿದೆ" ಎಂದಿದ್ದಾರೆ.
ಯೋಗಿ ಆದಿತ್ಯನಾಥ್ ಅವರ ಕಾರ್ಯವೈಖರಿಯ ವಿಚಾರವಾಗಿ ಬಿಜೆಪಿಯ ಕೆಲ ನಾಯಕರು ಆರೋಪಗಳನ್ನು ಮಾಡುತ್ತಿದ್ದು, ಆದಿತ್ಯನಾಥ್ ಅವರು ಕೊರೊನಾ ಪರಿಸ್ಥಿತಿಯನ್ನು ಸೂಕ್ತವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಇದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರ ಕಾರ್ಯವೈಖಯನ್ನು ಪ್ರಧಾನಿ ಮೋದಿ ಅವರು ಶ್ಲಾಘಿಸಿದ್ದಾರೆ.
ಮುಂಬರುವ ವರ್ಷ ನಡೆಯಲಿರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ಪುನಾರಚನೆ ಆಗುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಇವೆಲ್ಲದರ ನಡುವೆ, ಆದಿತ್ಯನಾಥ್ ಅವರು ಕಳೆದ ವಾರ ದೆಹಲಿಗೆ ತೆರಳಿದ್ದು, ಪ್ರಧಾನಿ ಮೋದಿ ಸೇರಿದಂತೆ ಗೃಹಸಚಿವ ಅಮಿತ್ ಶಾ ಹಾಗೂ ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿದ್ದರು.
ಲಕ್ನೋದಲ್ಲಿ ಎರಡು ವಾರಗಳ ಹಿಂದೆ ನಡೆದಿದ್ದ ಪಕ್ಷದ ಸಭೆಯ ಸಂದರ್ಭ ಅನೇಕ ಶಾಸಕರು ಹಾಗೂ ಮುಖಂಡರು ಕೊರೊನಾ ಎರಡನೇ ಅಲೆಯನ್ನು ಸರ್ಕಾರ ನಿರ್ವಹಣೆ ಮಾಡಿದ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರಲ್ಲದೇ, ಸಿಎಂ ಬದಲಾವಣೆಯಾಗಬೇಕು ಎನ್ನುವ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.