ಬೆಂಗಳೂರು, ಜೂ 14(DaijiworldNews/MS): ಶನಿವಾರದ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಬೆಂಗಳೂರನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬಂದಿಲ್ಲ ಎನ್ನಲಾಗಿದೆ.
ಈ ಬಗ್ಗೆ ಆಸ್ಪತ್ರೆ ವೈದ್ಯ ಆರುಣ್ ಎಲ್ ನಾಯ್ಕ್ ಅವರು ಮಾಧ್ಯಮ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಸದ್ಯ ಅವರನ್ನು ಫುಲ್ ಲೈಫ್ ಸಪೋರ್ಟ್ನೊಂದಿಗೆ ನ್ಯೂರೋ ಐಸಿಯುನಲ್ಲಿ ವಿಶೇಷ ಆರೈಕೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿದೆ ಅಂತ ಹೇಳಿದ್ದಾರೆ.
ಬನ್ನೇರುಘಟ್ಟದ ರಸ್ತೆಯ ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿದ್ದರಿಂದ ಅಪಘಾತ ಸಂಭವಿಸಿ ನಟ ವಿಜಯ್ ಅವರ ಬಲಗಾಲಿಗೆ ಹಾಗೂ ಮೆದುಳಿಗೆ ಗಂಭೀರವಾದ ಗಾಯವಾಗಿತ್ತು, ಕೂಡಲೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಿ, ಅವರಿಗೆ ಅಂದೇ ರಾತ್ರಿ ಆಸ್ಪತ್ರೆಯ ವೈದ್ಯರು ಮೆದುಳುಶಸ್ತ್ರ ಚಿಕಿತ್ಸೆ ನೇರವೇರಿಸಿದ್ದರು.ಸದ್ಯ ಐಸಿಯುನಲ್ಲಿರುವ ವಿಜಯ್ ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಲಾಕ್ ಡೌನ್ ಸಂದರ್ಭದಲ್ಲಿ ವಿಜಯ್ ಕೆಲವು ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದು , ಖಾಸಗಿ ಕಂಪನಿ ಉದ್ಯೋಗಿ ನವೀನ್ ಜತೆ ಔಷಧ ತರಲೆಂದು ಹೋಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿತ್ತು.