ಶ್ರೀನಗರ, ಜೂ 13 (DaijiworldNews/PY): "ಡಾ. ಬಿ.ಆರ್.ಅಂಬೇಡ್ಕರ್ ಅವರು ಈಗ ಜೀವಂತವಾಗಿಲ್ಲ. ಅವರು ಇದ್ದಿದ್ದರೆ ಅವರನ್ನು ಪಾಕಿಸ್ತಾನದ ಪರ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿತ್ತು" ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ದೂರಿದ್ದಾರೆ.
"ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದ 370ನೇ ವಿಧಿಯಲ್ಲಿ ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಲಾಗಿತ್ತು. ಕೇಂದ್ರ ಸರ್ಕಾರ ಈ ವಿಶೇಷ ಅಧಿಕಾರವನ್ನು ನಾಶ ಮಾಡಿದೆ "ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮುಫ್ತಿ, "ದೇವರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಅಂಬೇಡ್ಕರ್ ಅವರು ಇಂದು ಜೀವಂತವಾಗಿಲ್ಲ. ಇಲ್ಲದಿದ್ದರೆ ಅವರನ್ನೂ ಬಿಜೆಪಿಗರು ಪಾಕಿಸ್ತಾನದ ಪರ ಎಂದು ದೂಷಿಸುತ್ತಿದ್ದರು" ಎಂದಿದ್ದಾರೆ.
ಕ್ಲಬ್ಹೌಸ್ ಆಡಿಯೊ ಸಂವಾದದಲ್ಲಿ ಪಾಕಿಸ್ತಾನದ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದಿಗ್ವಿಜಯ್ ಸಿಂಗ್ ಅವರು, "ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿಯನ್ನು ತೆಗೆದುಹಾಕಿರುವ ತೀರ್ಮಾನ ದುಃಖಕರವಾಗಿದೆ. ಈ ವಿಚಾರದ ಬಗ್ಗೆ ಕಾಂಗ್ರೆಸ್ ಮರುಚಿಂತನೆ ಮಾಡುತ್ತಿತ್ತು" ಎಂದಿದ್ದರು.
"ಕೈ ನಾಯಕರು ಹಾಗೂ ನಾಯಕರು ಪಾಕಿಸ್ತಾನದ ಕೈಗೊಂಬೆಯಾಗಿ ವರ್ತಿಸುತ್ತಿದ್ದರು. ಹಾಗಾಗಿ ದಿಗ್ವಿಜಯ್ ಸಿಂಗ್ ಅವರು ಈ ರೀತಿಯಾದ ಹೇಳಿಕೆ ನೀಡುತ್ತಿದ್ದಾರೆ" ಎಂದು ಬಿಜೆಪಿ ಆರೋಪಿಸಿತ್ತು.