ಚಿಕ್ಕಮಗಳೂರು, ಜೂ 13 (DaijiworldNews/PY): "ಜಿಲ್ಲೆಯ ತರೀಕೆರೆ ತಾಲೂಕಿನ ಬೆಟ್ಟದ ಹಳ್ಳಿ ಎಂಬಲ್ಲಿ ವಿಜಯನಗರ ಕಾಲದ ಶಾಸನವೊಂದು ಹೊಲವನ್ನು ಉಳುಮೆ ಮಾಡುವಾಗ ಪತ್ತೆಯಾಗಿದೆ. ಈ ಶಾಸನವು ಕ್ರಿ.ಶ 1401ರಲ್ಲಿ ರಚನೆಯಾಗಿದ್ದು, ಸಂಗಮ ವಂಶದ ವೀರ ಪ್ರತಾಪ ಹರಿಹರ ಮಹಾರಾಯರನ ಆಳ್ವಿಕೆಗೆ ಒಳಪಟ್ಟಿದೆ" ಎಂದು ಹಾ.ಮ. ರಾಜಶೇಖರ ತಿಳಿದ್ದಾರೆ.
ಇದೊಂದು ದಾನ ಶಾಸನವಾಗಿದ್ದು ಒಟ್ಟು 21 ಸಾಲುಗಳನ್ನು ಹೊಂದಿದೆ. ಸ್ಥಳೀಯ ಕರಿ ಕಲ್ಲಿನಲ್ಲಿ ಕೆತ್ತನೆಯಾದ ಶಾಸನವು 3.6 ಇಂಚು ಎತ್ತರ, 1.6 ಇಂಚು ಅಗಲವಾಗಿದೆ. ಶಾಸನ ಶಿಲ್ಪ ಹಾಳಾಗಿ, ಅಕ್ಷರಗಳು ಅಲ್ಲಲ್ಲಿ ತುಟಿತಗೊಂಡಿವೆ. ಈ ಶಾಸನ ರಚನೆಯಾಗಿ ಸುಮಾರು 620 ವರ್ಷವಾಗಿದೆ.
"ವೀರ ಪ್ರತಾಪ ಹರಿಹರ ಮಹಾರಾಯರನ ಕಾಲದ ಶಕವರ್ಷ 1323 ರ ವಿಕ್ರಮ ಸಂವತ್ಸರದ ಅಶ್ವಯಿಜ ಸುದ್ಧ 5 ಗುರುವಾರದಂದು ರಚಿತವಾದ ಶಾಸನವು ಕ್ರಿ.ಶ 1401ಕ್ಕೆ ಸರಿಹೊಂದುವುದು. ಹರಿಹರನ ರಾಜ್ಯಭಾರದಡಿಯಲ್ಲಿ ಸ್ಥಳೀಯ ಮನ್ನೇಯ ಮಲ್ಲಯ ನಾಯಕ, ಮರಡಿ ಗೌಡ, ಪ್ರಜೆಗಳು ಸೇರಿ ಬೆಟ್ಟದ ಬಳಿಯ ಮಲ್ಲಪ್ಪನಿಗೆ ಮರಡಿ ಗೌಡನ ಗದ್ದೆಯ ಕೆಳಗೆ ಸೀಮೆಯ ಹೊಲವನ್ನು ಧಾರಾಪೂರ್ವಕವಾಗಿ ದಾನ ನೀಡುತ್ತಾರೆ. ಈ ದಾನದ ಉದ್ದೇಶ ಶಾಸನದಲ್ಲಿ ಲಭ್ಯವಿಲ್ಲ. ಕೊನೆಯಲ್ಲಿ ಸಂಪ್ರದಾಯದಂತೆ ಶಾಪಾಶಯವಿದ್ದು ದಾನವನ್ನು ಕಬಳಿಸಿದವರು ವಾರಣಾಸಿಯಲ್ಲಿ ತಂದೆ, ತಾಯಿಯನ್ನು ಕೊಂದ ಪಾಪಕ್ಕೆ ಗುರಿಯಾಗುವರು" ಎಂದು ತಿಳಿಸಿದೆ.
"ಈ ಶಾಸನ ಬರೆದವರು ಸಿಂಗೋಜನ ಮಗ ಮಾಚೋಜ ಎಂದು ಶಾಸನದಲ್ಲಿ ದಾಖಲಿಸಲಾಗಿದೆ. ಶಾಸನ ಅಧ್ಯಯನದ ಹಂತದಲ್ಲಿ ಇದೆ" ಎಂದು ಸಂಶೋಧಕರು ತಿಳಿಸಿದ್ದಾರೆ.
ಹಾ.ಮ.ರಾಜಶೇಖರ್ ಅವರು ಕ್ಷೇತ್ರ ತಜ್ಞರು ಜಾನಪದ ವಿಶ್ವವಿದ್ಯಾಲಯ ಶಿಗ್ಗಾಂವ್ ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸಂಶೋಧನೆಗೆ ಸಹಕರಿಸಿದ ಡಾ.ರವಿಕುಮಾರ ಕೆ. ನವಲಗುಂದ (ಸಂಶೋಧಕರು), ಡಾ.ರಮೇಶ್ ಆಚಾರ್(ಪ್ರಾಂಶುಪಾಲರು, ಉಡುಪಿ), ಪ್ರದೀಪ ಕುಮಾರ್ ಬಸ್ರೂರು (ಇತಿಹಾಸಕಾರರು), ಸ್ಥಳೀಯರಾದ ಕೊನೆಮನೆ ರಾಮಣ್ಣನ ಮಗ ನಾಗರಾಜು, ಪ್ರಕಾಶ, ರಾಜಣ್ಣಾ ಹಾಗೂ ಜಯಣ್ಣಾ ಇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.