ಹುಬ್ಬಳ್ಳಿ, ಜೂ 13 (DaijiworldNews/PY): "ರಾಜ್ಯದಲ್ಲಿ ಸದ್ಯಕ್ಕೆ ಚುನಾವಣೆ ಇಲ್ಲದ ಕಾರಣ ಪರಿಸ್ಥಿತಿ ಅವಲೋಕಿಸಿ ಮುಂದಿನ ಚುನಾವಣೆ ನಾಯಕತ್ವದ ವಿಚಾರದ ಬಗ್ಗೆ ಹೈಕಮಾಂಡ್ ನಿರ್ಧರಿಸಲಿದೆ" ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸದ್ಯಕ್ಕೆ ರಾಜ್ಯದಲ್ಲಿ ಚುನಾವಣೆ ಇಲ್ಲ. ಈ ಹಿನ್ನೆಲೆ ಪರಿಸ್ಥಿತಿಯನ್ನು ನೋಡಿಕೊಂಡು ಹೈಕಮಾಂಡ್ ನಾಯಕತ್ವದ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ" ಎಂದಿದ್ದಾರೆ.
ಬಿ. ವೈ ವಿಜಯೇಂದ್ರ ಸ್ವಾಮಿಗಳ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರದ ಬಗ್ಗೆ ವಿಶೇಷವಾದ ಅರ್ಥ ಕಲ್ಪಿಸುವ ಅಗತ್ಯವಿಲ್ಲ" ಎಂದು ತಿಳಿಸಿದ್ದಾರೆ.
"ನಾಯಕತ್ವ ಬದಲಾವಣೆ ಚರ್ಚೆಯಿಂದ ನಮಗೆ ತೊಂದರೆಯಾಗುತ್ತಿದೆ. ಕೆಲಸ ಮಾಡುವುದಕ್ಕೆ ಸಮಸ್ಯೆಯುಂಟಾಗುತ್ತಿದೆ. ರಾಜ್ಯದಲ್ಲಿ ನಾಯಕತ್ವದ ಚರ್ಚೆ ಎಲ್ಲಿಂದ ಹುಟ್ಟಿಕೊಂಡಿದೆ ಎಂದು ತಿಳಿದಿಲ್ಲ. ಈ ಚರ್ಚೆ ಅಪ್ರಸ್ತುತ. ಈ ವಿಚಾರದ ಬಗ್ಗೆ ಎಲ್ಲಿಯೂ ಚರ್ಚೆಯಾಗಿಲ್ಲ. ಮುಂದಿನ ಎರಡು ವರ್ಷ ಕೂಡಾ ಬಿ.ಎಸ್.ಯಡಿಯೂರಪ್ಪ ಅವರೇ ನಮ್ಮ ಸಿಎಂ" ಎಂದಿದ್ದಾರೆ.