ಮುಂಬೈ, ಜೂ. 13 (DaijiworldNews/HR): "2014 ರಿಂದ 2019ರವರೆಗೆ ಬಿಜೆಪಿ ಸಂಗಡ ಅಧಿಕಾರ ಹಂಚಿಕೊಂಡಿದ್ದಾಗ ಶಿವಸೇನೆ ಪಕ್ಷವನ್ನು ಗುಲಾಮರ ರೀತಿ ಕಾಣಲಾಗಿತ್ತು. ಪಕ್ಷವನ್ನು ರಾಜಕೀಯವಾಗಿ ಮುಗಿಸಲೂ ಪ್ರಯತ್ನಿಸಲಾಗಿತ್ತು" ಎಂದು ಸಂಜಯ್ ರಾವುತ್ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಅವರು, 'ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಶಿವಸೇನೆಗೆ ಎರಡನೇ ದರ್ಜೆಯ ಸ್ಥಾನಮಾನ ನೀಡಲಾಗಿದ್ದು, ಗುಲಾಮರ ರೀತಿ ನಡೆಸಿಕೊಳ್ಳಲಾಗಿತ್ತು. ನಮ್ಮ ಬೆಂಬಲದೊಡನೆ ಪಡೆದ ಅಧಿಕಾರ ಬಳಸಿ ನಮ್ಮದೇ ಪಕ್ಷವನ್ನು ಮುಗಿಸಲು ಪ್ರಯತ್ನ ನಡೆದಿತ್ತು" ಎಂದು ಆರೋಪಿಸಿದ್ದಾರೆ.
2019ರ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಸ್ಥಾನ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಈ ಎರಡು ಪಕ್ಷಗಳ ನಡುವೆ ಬಿರುಕು ಮೂಡಿದ್ದು, ಬಿಜೆಪಿಯ ಅತಿ ಹಳೆಯ ಮಿತ್ರ ಪಕ್ಷವಾಗಿದ್ದ ಶಿವಸೇನಾ ಅನಿರೀಕ್ಷಿತವಾಗಿ ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಸೇರಿಕೊಂಡು ಮಹಾ ವಿಕಾಸ ಅಘಾಡಿ ಹೆಸರಿನಲ್ಲಿ ಮೈತ್ರಿಕೂಟ ರೂಪಿಸಿ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿದಿತ್ತು.
ಇನ್ನು ಮೂರು ದಿನ ಮಟ್ಟಿಗೆ ದೇವೇಂದ್ರ ಫಡಣವೀಸ್ ಜೊತೆ ಸೇರಿಕೊಂಡು ಬಿಜೆಪಿಯೊಡನೆ ಅಧಿಕಾರ ಹಂಚಿಕೊಳ್ಳಲು ಮುಂದಾಗಿದ್ದ ಎನ್ಸಿಪಿ ಮುಖಂಡ ಅಜಿತ್ ಪವಾರ್ ಈಗ ಅಘಾಡಿಯ ಅತಿ ಪ್ರಬಲ ವಕ್ತಾರರಾಗಿದ್ದಾರೆ ಎಂದು ಹೇಳಿದ್ದಾರೆ.