ನವದೆಹಲಿ, ಜೂ. 13 (DaijiworldNews/HR): ದೆಹಲಿಯಲ್ಲಿ ವಿಧಿಸಿದ್ದ ಲಾಕ್ಡೌನ್ ಅನ್ನು ಹಂತ ಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ಸೋಮವಾರದಿಂದ ಶೇಕಡ 50ರಷ್ಟು ಸಾಮರ್ಥ್ಯದೊಂದಿಗೆ ರೆಸ್ಟೊರೆಂಟ್ಗಳು ಕಾರ್ಯನಿರ್ವಹಿಸಬಹುದು. ಅಲ್ಲದೆ ಪ್ರತಿ ಪುರಸಭೆ ವಲಯದಲ್ಲಿ ಒಂದು ಮಾರುಕಟ್ಟೆಯನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಭಾನುವಾರ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಉತ್ಸವಗಳನ್ನು ನಡೆಸಲು, ಶಾಲಾ–ಕಾಲೇಜುಗಳು, ಶೈಕ್ಷಣಿಕ ಮತ್ತು ತರಬೇತಿ ಸಂಸ್ಥೆಗಳು, ಚಿತ್ರಮಂದಿರಗಳು, ಮೆಲ್ಪಿಪ್ಲೆಕ್ಸ್, ಈಜುಕೊಳಗಳು, ಜಿಮ್ಗಳು, ಸಾರ್ವಜನಿಕ ಉದ್ಯಾನಗಳನ್ನು ತೆರೆಯಲು ಅವಕಾಶ ನೀಡಿಲ್ಲ. ನಗರದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಲಾಗಿದ್ದು, ಅಲ್ಲಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ" ಎಂದರು.
ಇನ್ನು ಮಾಲ್ಗಳು, ಮಾರುಕಟ್ಟೆ ಮಳಿಗೆಗಳು ಸೋಮವಾರದಿಂದ ಸಮ–ಬೆಸ ಸಂಖ್ಯೆಯ ಆಧಾರದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿವೆ.
ದೆಹಲಿಯಲ್ಲಿ ಸದ್ಯಕ್ಕೆ ಕೊರೊನಾ ಪ್ರಕರಣಗಳು ಇಳಿಕೆ ಕಂಡಿದೆ. ಒಂದು ವೇಳೆ ಪ್ರಕರಣಗಳು ಹೆಚ್ಚಾದರೆ ಮತ್ತೆ ಕಠಿಣ ನಿರ್ಬಂಧಗಳನ್ನು ಹೇರಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.