ಬೆಂಗಳೂರು, ಜೂ 13 (DaijiworldNews/PY): "ರಾಜ್ಯಕ್ಕೆ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸುತ್ತಿದ್ದು, ಅವರು ಸಚಿವರು, ಶಾಸಕರೊಂದಿಗೆ ಸಭೆ ನಡೆಸಲಿದ್ದಾರೆ. ನಾನು ಅವರೊಂದಿಗಿದ್ದು ಸಹಕಾರ ನೀಡುತ್ತೇನೆ" ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಹಲವಾರು ವಿಚಾರಗಳ ಕುರಿತು ಮಾತನಾಡಿದ ಅವರು, "ವಾರಕ್ಕೆ ಒಮ್ಮೆ ಜಿಲ್ಲೆಗಳಿಗೆ ಭೇಟಿ ನೀಡಿ ಅಭಿವೃದ್ದಿ ಕಾರ್ಯದ ಬಗ್ಗೆ ಪರಿಶೀಲನೆ ಮಾಡುತ್ತೇನೆ. ಹಾಸನದಲ್ಲಿ ಏರ್ಪೋರ್ಟ್ ಕಾರ್ಯ ನಡೆಯುತ್ತಿದೆ. ಶೀಘ್ರವೇ ದೇವೇಗೌಡರೊಂದಿಗೆ ಸೇರಿ ಶಂಕುಸ್ಥಾಪನೆ, ಅಭಿವೃದ್ದಿ ಕಾರ್ಯವನ್ನು ಸಹ ಕೈಗೊಳ್ಳಲಾಗುವುದು" ಎಂದು ಹೇಳಿದರು.
ಅನ್ಲಾಕ್ ಪ್ರಕ್ರಿಯೆ ಬಗ್ಗೆ ಮಾತನಾಡಿದ ಅವರು, "ಅನ್ಲಾಕ್ ಬಳಿಕ ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದ್ದು, ಈ ಬಗ್ಗೆ ನಾನು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತೇನೆ. ಬೆಂಗಳೂರಿಗೆ ಬರುವವರಿಗೆ ಕಠಿಣ ಪರೀಕ್ಷೆ ಮಾಡಲು ಸೂಚನೆ ನೀಡುತ್ತೇನೆ. ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ತಿಳಿಸಿದರು.
"ತಿರುಕನ ಕನಸು ಕಾಣುತ್ತಿರುವವರಿಗೆ ನಾನು ಏನೂ ಹೇಳಲಾರೆ. ಅವರ ನಾಯಕತ್ವದ ಕೊರತೆಯ ಕಾರಣದಿಂದ ಕಾಂಗ್ರೆಸ್ನ ಪರಿಸ್ಥಿತಿ ಹೇಗಿದೆ ಎಂದು ತಿಳಿದಿದೆ. ಈ ಬಗ್ಗೆ ಎಲ್ಲರೂ ಕೂಡಾ ಗಮನಿಸಿದ್ದಾರೆ" ಎಂದು ದಿಗ್ವಿಜಯ ಸಿಂಗ್ ಆರ್ಟಿಕಲ್ 370 ಮರು ಪರಿಶೀಲನೆ ಬಗ್ಗೆ ಪ್ರತಿಕ್ರಿಯಿಸಿದರು.