ಬೆಂಗಳೂರು, ಜೂ 13 (DaijiworldNews/PY): "ರಾಜ್ಯದಲ್ಲಿ ವೇಗವಾಗಿ ವ್ಯಾಕ್ಸಿನ್ ಹಂಚಿಕೆ ಮಾಡಲಾಗುತ್ತಿದ್ದು, ಲಸಿಕೆ ವಿತರಣೆಯಲ್ಲಿ ದೇಶದಲ್ಲೇ ನಾವು ಆರನೇ ಸ್ಥಾನದಲ್ಲಿದ್ದೇವೆ" ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯಕ್ಕೆ ನಿನ್ನೆ 3 ಲಕ್ಷ ಡೊಸ್ ಲಸಿಕೆ ಬಂದಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 1.68 ಕೋಟಿ ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ. ಕೇಂದ್ರ ಸರ್ಕಾರೇ ಉಚಿತ ಲಸಿಕೆ ನೀಡುತ್ತಿರುವ ಕಾರಣದಿಂದ 3 ಕೋಟಿ ಲಸಿಕೆಗೆ ನೀಡಿದ್ದ ಆರ್ಡರ್ ಅನ್ನು ರದ್ದು ಮಾಡುತ್ತೇವೆ. ಅಲ್ಲದೇ, ಲಸಿಕೆ ಕಂಪೆನಿಗೆ ನೀಡಿದ ಹಣವನ್ನು ಸಹ ವಾಪಾಸ್ಸು ಪಡೆಯುತ್ತೇವೆ" ಎಂದಿದ್ದಾರೆ.
"ನಾಳೆಯಿಂದ ಬೆಂಗಳೂರಿನಲ್ಲಿ ಅನ್ಲಾಕ್ ಪ್ರಕ್ರಿಯೆ ಪ್ರಾರಂಭವಾಗುತ್ತಿರುವ ಕಾರಣ ಜಿಲ್ಲೆಗಳಿಂದ ಜನರು ವಾಪಾಸ್ಸಾಗುತ್ತಿದ್ದಾರೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಜನರು ಎಚ್ಚರ ವಹಿಸಬೇಕು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಕಡ್ಡಾಯ" ಎಂದು ತಿಳಿಸಿದ್ದಾರೆ.