ಲಕ್ನೋ, ಜೂ 13 (DaijiworldNews/PY): ಉತ್ತರ ಪ್ರದೇಶದ ಬೈರಿಯಾ ಕ್ಷೇತ್ರದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಅವರು ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, "ಹೇಡಿ ಜವಾಹರಲಾಲ್ ನೆಹರೂ ಅವರ ನಾಯಕತ್ವದ ಕಾರಣದಿಂದಾಗಿ ಸ್ವಾತಂತ್ರ್ಯದ ಸಂದರ್ಭ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಣೆ ಮಾಡಲು ಸಾಧ್ಯವಾಗಿಲ್ಲ" ಎಂದಿದ್ದಾರೆ.
"ವಿಭಜನೆಗೆ ಕಾರಣವಾದದ್ದು ಕಾಂಗ್ರೆಸ್ನ ಕೊಳಕು ಚಿಂತನೆ. ನೆಹರೂ ಅವರು ಪ್ರಧಾನ ಮಂತ್ರಿ ಆಗಿರದೇ ಇರುತ್ತಿದ್ದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಬಹುದಿತ್ತು" ಎಂದು ತಿಳಿಸಿದ್ದಾರೆ.
"ಎರಡು ಸಂಸ್ಕೃತಿಗಳ ಆಧಾರದ ಮೇಲೆ ಎರಡು ರಾಷ್ಟ್ರಗಳು ರಚನೆಯಾದವು. ಆದರೆ, ಹೇಡಿ ನೆಹರೂ ಅವರ ನಾಯಕತ್ವದಿಂದಾಗಿ ಸ್ವಾತಂತ್ರ್ಯದ ಸಮಯದಲ್ಲಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಸಾಧ್ಯವಾಗಿಲ್ಲ. ನೆಹರೂ ಅವರ ಬದಲಿಗೆ ಸರ್ದಾರ್ ಪಟೇಲ್ ಅವರು ಪ್ರಧಾನಿಯಾಗಿದ್ದರೆ ಭಾರತ ಹಿಂದೂ ರಾಷ್ಟ್ರವಾಗುತ್ತಿತ್ತು" ಎಂದಿದ್ದಾರೆ.
ಕಾಶ್ಮೀರದಲ್ಲಿ 370ನೇ ವಿಧಿಯನ್ನು ಉಲ್ಲೇಖಿಸಿ ಮಾತನಾಡಿದ್ದ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಉಲ್ಲೇಖಿಸಿದ ಸುರೇಂದ್ರ ಸಿಂಗ್, "ದಿಗ್ವಿಜಯ್ ಸಿಂಗ್ ಅವರ ವಿರುದ್ದ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು" ಎಂದು ಒತ್ತಾಯಿಸಿದ್ದಾರೆ.
ತಮ್ಮ ಪಕ್ಷ ಅಧಿಕಾರಕ್ಕೆ ಮರಳಿದರೆ 370ನೇ ವಿಧಿ ಹಿಂತೆಗೆದುಕೊಳ್ಳುವಿಕೆ ಹಾಗೂ ಜಮ್ಮು-ಕಾಶ್ಮೀರ ಕಳೆದುಕೊಂಡಿರುವ ರಾಜ್ಯದ ಸ್ಥಾನಮಾನ ಮರುಪರಿಶೀಲನೆ ಮಾಡುವುದಾಗಿ ದಿಗ್ವಿಜಯ್ ಸಿಂಗ್ ಅವರು ಸಾಮಾಜಿಕ ಮಾಧ್ಯಮದ ಆಡಿಯೋ ಚಾಟ್ನಲ್ಲಿ ಪ್ರತಿಕ್ರಿಯೆ ನೀಡಿದ್ದರು.