ರಾಜಸ್ಥಾನ, ಜೂ 13 (DaijiworldNews/PY): ರಾಜಸ್ಥಾನದ ಬಿಕಾನೇರ್ನಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಅಭಿಯಾನ ನಡೆಸುತ್ತಿರುವ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸಾಂದರ್ಭಿಕ ಚಿತ್ರ
ಕೊರೊನಾದ ಎರಡನೇ ಅಲೆ ಅಪಾಯಕಾರಿಯಾಗಿರುವ ಕಾರಣ ಜನರಿಗೆ ತ್ವರಿತವಾಗಿ ಲಸಿಕೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಮನೆ ಮನೆಗೆ ತೆರಳಿ ಲಸಿಕೆ ಹಾಕುವ ಅಬಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
"ವ್ಯಾಟ್ಸ್ಯಾಪ್ ಮೂಲಕ ನೋಂದಣಿ ಮಾಡಿಕೊಂಡ 45 ವರ್ಷಕ್ಕಿಂತ ಮೇಲ್ಪಟ್ಟ ಮಂದಿಗೆ ಅವರು ಇರುವ ಸ್ಥಳಗಳಿಗೆ ತೆರಳಿ ಕೊರೊನಾ ಲಸಿಕೆ ನೀಡಲಾಗುತ್ತಿದೆ. ಈ ಲಸಿಕಾ ಅಭಿಯಾನಕ್ಕೆ ಎರಡು ಆ್ಯಂಬುಲೆನ್ಸ್ಗಳನ್ನು ಬಳಸಲಾಗುತ್ತಿದ್ದು, ಹಿರಿಯ ವೈದ್ಯ ಹಾಗೂ ಪ್ಯಾರಾಮೆಡಿಕಲ್ ಸಿಬ್ಬಂದಿ ಇರುವ ತಂಡ ಲಸಿಕೆ ನೀಡುತ್ತಿದೆ" ಎಂದು ಸ್ಥಳೀಯ ವೈದ್ಯಾಧಿಕಾರಿ ಹೇಳಿದ್ದಾರೆ.
ಒಂದು ನಿಗದಿತ ವಿಳಾಸದಲ್ಲಿ ಕನಿಷ್ಠ ಹತ್ತು ಮಂದಿಯನ್ನು ನೋಂದಾಯಿಸಿಕೊಂಡ ಬಳಿಕ ಲಸಿಕಾ ವ್ಯಾನ್ ಮನೆ ಮನೆಗೆ ತೆರಳಿ ಲಸಿಕೆ ಹಾಕುತ್ತದೆ. ಇದರಿಂದ ಲಸಿಕೆ ವ್ಯರ್ಥವಾಗುವುದು ತಪ್ಪುತ್ತದೆ. ಏಕೆಂದರೆ, ಕೊರೊನಾ ಲಸಿಕೆಯ ಒಂದು ಸೀಸೆಯಿಂದ ಹತ್ತು ಮಂದಿಗೆ ತಲಾ ಒಂದು ಡೋಸ್ ನೀಡಬಹುದಾಗಿದೆ.
"ಕೊರೊನಾ ಲಸಿಕೆ ನೀಡಿದ ನಂತರ ನಿಗಾ ವಹಿಸಲು ವೈದ್ಯರ ತಂಡ ಕೆಲ ಸಮಯದ ಹೊತ್ತು ಸ್ಥಳದಲ್ಲಿರುತ್ತಾರೆ" ಎಂದು ವೈದ್ಯರು ಹೇಳಿದ್ದಾರೆ.