ಬೆಂಗಳೂರು, ಜೂ 13 (DaijiworldNews/PY): ಪವರ್ ಬ್ಯಾಂಕ್ ಆಪ್ ಮೂಲಕ ಜನರಿಂದ ನೂರಾರು ಕೋಟಿ. ರೂ. ಸಂಗ್ರಹಿಸಿ ವಂಚಿಸಿದ ಪ್ರಕರಣದಲ್ಲಿ ಚೀನಾ ಹಾಗೂ ಟಿಬೆಟ್ನ ನಾಲ್ವರು ಸೇರಿದಂತೆ 11 ಮಂದಿಯನ್ನು ಸಿಐಡಿಯ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಹವಾಲಾ ದಂಧೆ ಮೂಲಕ ವ್ಯವಹಾರ ನಡೆಸುತ್ತಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಕಿಂಗ್ ಪಿನ್ ಕೇರಲ ಮೂಲದ ಅನಸ್ ಅಹ್ಮದ್ ಅನ್ನು ಕೂಡಾ ಬಂಧಿಸಲಾಗಿದೆ. ಈತನ ಪತ್ನಿ ಹು ಕ್ಸಿಯೋಲಿನ್ ಚೀನಾದ ಪ್ರಜೆಯಾಗಿದ್ದು, ಆಕೆಗೂ ನೋಟಿಸ್ ನೀಡಲಾಗಿದೆ.
ಬೆಂಗಳೂರು ಮೂಲದ ರೇಜೋರ್ ಪೇ ಕಂಪೆನಿಯ ಅಧಿಕಾರಿಗಳು ವಂಚಕ 13 ಕಂಪೆನಿಗಳ ವಿರುದ್ದ ನೀಡಿದ್ದು, ಈ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಚೀನಾ ಹಾಗೂ ಟಿಬೆಟ್ನ ತಲಾ ಇಬ್ಬರು ಸ್ಥಳೀಯ ಐವರು ನಿರ್ದೇಶಕರು ಸೇರಿ 11 ಮಂದಿಯನ್ನು ಬಂಧಿಸಲಾಗಿದೆ.
ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಗಳು ಈವರೆಗೆ ಸುಮಾರು 2,000 ಜನರಿಂದ ಹೂಡಿಕೆ ಮಾಡಿಕೊಂಡು, ಸುಮಾರು 290 ಕೋಟಿ. ರೂ ವಂಚನೆ ಮಾಡಿರುವುದಾಗಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆರೋಪಿಗಳಿಗೆ ಸೇರಿರುವ ದೇಶದ ವಿವಿಧ ಬ್ಯಾಂಕ್ಗಳ ಸುಮಾರು 2,400 ರೂ. ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.
ಕೇರಳ ಮೂಲದ ವ್ಯಾಪಾರಿ ಅನಸ್ ಅಹ್ಮದ್ ಹವಾಲಾ ಹಾಗೂ ಅಕ್ರಮ ಹಣ ವರ್ಗಾವಣೆ ದಂಧೆಯ ಮುಖೇನ ವ್ಯವಹಾರ ನಡೆಸುತ್ತಿದ್ದರು. ಈತ ಚೀನಾದ ಹವಾಲಾ ಏಜೆಂಜರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾನೆ. ಅಕ್ರಮ ಹಣ ವರ್ಗಾವಣೆಯ ಉದ್ದೇಶಕ್ಕಾಗಿ ಅವರು ಬುಲ್ಫಿಂಚ್ ಟೆಕ್ನಾಲಜೀಸ್, ಹೆಚ್ ಆಂಡ್ ಎಸ್ ವೆಂಚರ್ಸ್ ಹಾಗೂ ಬಯೋಸಾಫ್ಟ್ ವೆಂಚರ್ಸ್ ಕಂಪೆನಿ ತೆರೆದಿದ್ದ ಎಂದು ತಿಳಿದುಬಂದಿದೆ.
ಕೇರಳ ಮೂಲದ ವಕೀಲರು ಆರೋಪಿಗಳ ಚಟುವಟಿಕೆಗಳನ್ನು ಬೆಂಬಲಿಸಿದ್ದರು. ನಕಲಿ ಕಂಪನಿಗಳನ್ನು ಪ್ರಾರಂಭಿಸಲು, ಹವಾಲಾ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡಲು ಇವರು ಆರೋಪಿಗಳಿಗೆ ಸಹಾಯ ಮಾಡಿದ್ದಾರೆ. ಅವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಆ ವ್ಯಕ್ತಿಯೂ ಚೀನಾದ ಪ್ರಜೆಯನ್ನು ವಿವಾಹವಾಗಿದ್ದಾರೆ ಎಂದು ಸಿಐಡಿ ಪೊಲೀಸರು ತಿಳಿಸಿದ್ದಾರೆ.