ಬೆಂಗಳೂರು, ಜೂ 12 (DaijiworldNews/PY): "ಸುಳ್ಳು, ಭರವಸೆಗಳನ್ನು ನೀಡಿ ಅಧಿಕಾರಕ್ಕೇರಿರುವ ಪ್ರಧಾನಿ ನರೇಂದ್ರ ಮೋದಿ ಜನರ ರಕ್ತ ಹೀರುತ್ತಿದ್ದಾರೆ ಎನ್ನುವುದು ಈಗ ತಿಳಿಯುತ್ತಿದೆ. ಮೋದಿ ಅವರಂತ ಸುಳ್ಳುಗಾರ ಮತ್ತೊಬ್ಬರಿಲ್ಲ. ಈವರೆಗೆ ಇಂತಹ ಪ್ರಧಾನಿಯನ್ನು ಕಂಡಿಲ್ಲ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, "ಕೊರೊನಾದ ಎರಡನೇ ಅಲೆ ಬಗ್ಗೆ ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ತಿಳಿದಿತ್ತು. ಆದರೂ ಕೂಡಾ ಅವರು ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮದಿಂದ ಇಂದು ರಾಜ್ಯ ಹಾಗೂ ದೇಶದಲ್ಲಿ ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ. ಕೊರೊನಾ ಎರಡನೇ ಅಲೆ ಬಗ್ಗೆ ಇದಕ್ಕೂ ಮುನ್ನ ಎಚ್ಚೆತ್ತುಕೊಳ್ಳುತ್ತಿದ್ದಲ್ಲಿ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ" ಎಂದಿದ್ದಾರೆ.
"ಕೊರೊನಾದಿಂದ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ. ಆದರೆ, ಸಾವಿನ ಬಗ್ಗೆ ಸರಿಯಾದ ಲೆಕ್ಕ ನೀಡುತ್ತಿಲ್ಲ. ರಾಜ್ಯದಲ್ಲಿ ಕೂಡಾ ಕೊರೊನಾಗೆ ಬಲಿಯಾದವರ ಬಗ್ಗೆ ಸೂಕ್ತವಾದ ಮಾಹಿತಿ ನೀಡದೇ ಮುಚ್ಚಿಡುತ್ತಿದ್ದಾರೆ. ಸುಳ್ಳು ಲೆಕ್ಕಗಳನ್ನು ತೋರಿಸುತ್ತಿದ್ದಾರೆ. ಡೆತ್ ಆಡಿಟ್ ನಡೆಸಿದಲ್ಲಿ ಸತ್ಯ ತಿಳಿಯುತ್ತದೆ" ಎಂದು ಹೇಳಿದ್ದಾರೆ.
"ಹುಡುಗರು ಮೋದಿ, ಮೋದಿ ಎಂದು ಘೋಷಣೆ ಕೂಗುತ್ತಿದ್ದರು. ಕೊರೊನಾ ನಿಯಂತ್ರಣಕ್ಕಾಗಿ ಪ್ರಧಾನಿ ಮೋದಿ ಅವರ ಹೇಳಿದಂತೆ ಚಪ್ಪಾಳೆ, ಗಂಟೆ, ಜಾಗಟೆ ಹೊಡೆಯಲಾಯಿತು. ಆದರೆ, ಕೊರೊನಾ ಮೊದಲ ಅಲೆಯ ಜೊತೆ ಎರಡನೇ ಅಲೆಯೂ ಪ್ರಾರಂಭವಾಯಿತು" ಎಂದು ಆರೋಪಿಸಿದ್ದಾರೆ.
"ಪ್ರಧಾನಿ ಮೋದಿ ಅವರು ತಿಗಣೆ ರೀತಿ ದೇಶದ ಜನರ ರಕ್ತ ಹೀರುತ್ತಿದ್ದಾರೆ. ಒಂದು ಕಡೆ ಜನರು ಕೊರೊನಾದಿಂದ ಅಸುನೀಗುತ್ತಿದ್ದಾರೆ. ಇನ್ನೊಂದೆಡೆ ತೈಲ ಬೆಲೆ ಸೇರಿದಂತೆ ಅಗತ್ಯ ಬೆಲೆ ಏರಿಕೆ ಮಾಡಲಾಗುತ್ತಿದೆ. ಹೀಗೆ ಮಾಡಿದರೆ ಜನಸಾಮಾನ್ಯರು ಜೀವನ ನಿರ್ವಹಣೆ ಮಾಡುವುದಾದರೂ ಹೇಗೆ?" ಎಂದು ಕೆಂಡಕಾರಿದ್ದಾರೆ.