ನವದೆಹಲಿ, ಜೂ.12 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯರು ಮುಖ್ಯವಲ್ಲ. ರಾಜಕೀಯ ಮುಖ್ಯ. ಸತ್ಯದ ಬಗ್ಗೆ ಅವರಿಗೆ ಕಾಳಜಿ ಇಲ್ಲ, ಅಪಪ್ರಚಾರ ಮಾಡುತ್ತಾರೆ, ಜನರು ಪ್ರಧಾನ ಮಂತ್ರಿಗಳನ್ನು ಜಿಮ್ಮೆದಾರ್ ಕೌನ್ (ಜವಾಬ್ದಾರರು ಯಾರು) ಎಂದು ಕೇಳುವ ಸಮಯ ಬಂದಿದೆ" ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿ ಜಿಮ್ಮೆದಾರ್ ಕೌನ್(ಜವಾಬ್ದಾರರು ಯಾರು) ಅಭಿಯಾನದ ಮೂಲಕ ಕೊರೊನಾ ನಿರ್ವಹಣೆ ಬಗ್ಗೆ ಸರ್ಕಾರಕ್ಕೆ ಪ್ರಶ್ನೆಗಳನ್ನು ಹಾಕುತ್ತಿರುವ ಪ್ರಿಯಾಂಕಾ ಗಾಂಧಿ, "ಕೊರೊನಾ ಸಮಯದಲ್ಲಿ ಇಡೀ ಜಗತ್ತು ಪ್ರಧಾನ ಮಂತ್ರಿಯ 'ಆಡಳಿತದಲ್ಲಿ ಅಸಮರ್ಥತೆಯನ್ನು ಕಂಡಿದೆ" ಎಂದಿದ್ಧಾರೆ.
ಇನ್ನು ಮೋದಿ ಸರ್ಕಾರ ಸಾಂಕ್ರಾಮಿಕ ರೋಗದ ಆರಂಭದಿಂದಲೂ, ಸತ್ಯವನ್ನು ಮರೆಮಾಚಲು ಮತ್ತು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಎಲ್ಲ ಪ್ರಯತ್ನಗಳನ್ನು ಮಾಡಿದ್ದರಿಂದ ಎರಡನೇ ಅಲೆಯು ದೇಶಕ್ಕೆ ಭೀಕರವಾಗಿ ಅಪ್ಪಳಿಸಿತು. ಸರ್ಕಾರವು ನಿಷ್ಕ್ರಿಯ ಸ್ಥಿತಿಗೆ ಇಳಿಯಿತು. ಈ ನಿಷ್ಕ್ರಿಯತೆಯು ವೈರಸ್ ಹೆಚ್ಚು ಹರಡಲು ಮತ್ತು ಹೇಳಲಾಗದ ದುಃಖಕ್ಕೆ ಕಾರಣವಾಗಿದೆ" ಎಂದು ಕಿಡಿ ಕಾರಿದ್ದಾರೆ.
ಕೊರೊನಾ ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಕೈಗೊಳ್ಳಬೇಕಾದ ಕ್ರಮಗಳ ಸರಣಿಯನ್ನು ಪ್ರಿಯಾಂಕಾ ಗಾಂಧಿ ಪಟ್ಟಿ ಮಾಡಿದ್ದಾರೆ.