ದಾವಣಗೆರೆ, ಜೂ 12 (DaijiworldNews/PY): ಕೊರೊನಾ ಹಿನ್ನೆಲೆ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಬಸ್ ಸಂಚಾರ ಬಂದ್ ಆಗಿವೆ. ಹೀಗಾಗಿ ತಾಯಿಯೊಬ್ಬರು ತಮ್ಮ ಐದು ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 90 ಕಿ.ಮೀ ಕ್ರಮಿಸಿದ ಘಟನೆ ದಾವಣೆಗೆರೆಯಲ್ಲಿ ನಡೆದಿದೆ.
ನಾಗರತ್ನ ಎಂಬವರು ಶಿವಮೊಗ್ಗ ಜಿಲ್ಲೆಯ ಗಾಡಿಕೊಪ್ಪದಿಂದ ತಮ್ಮ ಐದು ವರ್ಷದ ಮಗನನ್ನು ಹೆಗಲ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ನಡೆದುಕೊಂಡು ಬಂದಿದ್ದಾರೆ. ಈ ವೇಳೆ ದಾವಣಗೆರೆಯ ಎಸ್ಎಸ್ ಖಾಸಗಿ ಆಸ್ಪತ್ರೆ ಬಳಿ ಪೊಲೀಸರು ಇವರನ್ನು ರಕ್ಷಿಸಿದ್ದಾರೆ. ಕೌಟುಂಬಿಕ ಕಲಹದ ಕಾರಣ ಈ ಮನೆ ಬಿಟ್ಟು ಬಂದಿದ್ದಾಳೆ ಎನ್ನಲಾಗಿದೆ.
ಪತಿಯ ಜೊತೆ ಜಗಳವಾಡಿಕೊಂಡ ನಾಗರತ್ನ ಬೆಳಗ್ಗಿನ ಜಾವ ಮನೆ ಬಿಟ್ಟು ಕಾಲ್ನಡಿಗೆಯಲ್ಲಿ ತನ್ನ ಐದು ವರ್ಷದ ಮಗನನ್ನು ಹೆಗಲಮೇಲೆ ಎತ್ತಿಕೊಂಡು ಸುಮಾರು 90 ಕಿ. ಮೀ ಕ್ರಮಿಸಿದ್ದು, ರಾತ್ರಿ ಸುಮಾರು 9.30 ವೇಳೆಗೆ ದಾವಣೆಗೆರೆ ತಲುಪಿದ್ದಾರೆ. ಈ ಸಂದರ್ಭ ನಗರದ ಎಸ್ಎಸ್ ಆಸ್ಪತ್ರೆಯ ಬಳಿ ಪೊಲೀಸರು ಆಕೆಯನ್ನು ವಿಚಾರಿಸಿದ್ದಾರೆ.
ವಿಷಯ ತಿಳಿದ ಪೊಲೀಸರು ತಮ್ಮ ವಾಹನದಲ್ಲಿ ತಾಯಿ ಹಾಗೂ ಮಗುವನ್ನು ತುಂಬಿಗೆರೆ ಗ್ರಾಮಕ್ಕೆ ಕಳುಹಿಸುವ ವ್ಯವಸ್ಥೆ ಮಾಡಿದ್ದು, ಮಾನವೀಯತೆ ಮೆರೆದಿದ್ದಾರೆ.