ಚಿತ್ರದುರ್ಗ, ಜೂ 12 (DaijiworldNews/PY): "ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಹೆಣ ಸುಡೋಕೂ, ಆಸ್ಪತ್ರೆಗೆ ದಾಖಲಾಗಲು, ಔಷಧಿ ಹಾಗೂ ಲಸಿಕೆ ಪಡೆಯಲು ಸರದಿ ಸಾಲು ನಿಲ್ಲುವಂತಾಗಿದೆ. ಔಷಧಿ, ಶವದಲ್ಲೂ ಹಣ ಲೂಟಿ ಮಾಡುತ್ತಿದೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಹಿರಿಯೂರಲ್ಲಿ ಮಾತನಾಡಿದ ಅವರು, "ಬಿಜೆಪಿ ಸರ್ಕಾರದ ಅಧಿಕಾರದ ಅವಧಿಯಲ್ಲಿ ಎಲ್ಲದಕ್ಕೂ ಸರದಿ ಸಾಲು ನಿಲ್ಲುವಂತಾಯಿತು. ಬಿಜೆಪಿ ಸರ್ಕಾರ ಇನ್ನೇನು ಜನರನ್ನು ಕಾಪಾಡಿದೆ. ಔಷಧಿ, ಶವದಲ್ಲೂ ಹಣ ಲೂಟಿ ಮಾಡುತ್ತಿದೆ. ದೇಶಕ್ಕೆ ಕೊರೊನಾ ತಂದವರು ಯಾರು? ನಾವಾ?. ಬಿಜೆಪಿ ಸರ್ಕಾರಕ್ಕೆ ಜನರು ಉಗಿಯುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ದೇಶದಲ್ಲಿ ದಿನೇ ದಿನೇ ಇಂಧನ ಬೆಲೆ ಏರಿಕೆಯಾಗುತ್ತಿದೆ. ಇದನ್ನು ಖಂಡಿಸಿ ಜೂನ್ 15ರಿಂದ ಐದು ದಿನ ಐದು ಸಾವಿರ ಕಡೆ ಜನಪರ ಹೋರಾಟ ಮಾಡುತ್ತೇವೆ. ತೈಲ ಬೆಲೆ ಏರಿಕೆಯಾದಂತೆ ರೈತರ ಬೆಂಬಲ ಬೆಲೆ ಏರಿಕೆ ಮಾಡಿದ್ದೀರಾ?. ಸರ್ಕಾರಿ, ಖಾಸಗಿ, ದಿನಗೂಲಿ ನೌಕರರ ಸಂಬಳವನ್ನು ಏರಿಸಿಲ್ಲ. ನಿಮ್ಮ ಜೇಬು ಮಾತ್ರವೇ ತುಂಬಬೇಕಾ?. ಈ ಸರ್ಕಾರವನ್ನು ಜನಸಾಮಾನ್ಯರು ಸೇರಿ ಕಿತ್ತೆಸೆಯಬೇಕು" ಎಂದಿದ್ದಾರೆ.