ನವದೆಹಲಿ, ಜೂ.12 (DaijiworldNews/HR): ಕೋವಿಶೀಲ್ಡ್ ಕೊರೊನಾ ಲಸಿಕೆ ಡೋಸೇಜ್ ನಡುವಿನ ಅಂತರದಲ್ಲಿ ತಕ್ಷಣ ಬದಲಾವಣೆ ಅಗತ್ಯವಿದೆ ಎಂಬ ವರದಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರತಿಕ್ರಿಯಿಸಿದ್ದು, ಡೋಸ್ಗಳ ನಡುವಿನ ಅಂತರದ ಬಗ್ಗೆ ಆತಂಕಪಡಬೇಕಿಲ್ಲ ಎಂದು ಹೇಳಿದೆ.
ಸಾಂಧರ್ಭಿಕ ಚಿತ್ರ
ಕೊರೊನಾದ ರೂಪಾಂತರಗಳು ಹರಡುವ ಹಿನ್ನೆಲೆಯಲ್ಲಿ ಎರಡು ಡೋಸ್ಗಳ ನಡುವಣ ಅಂತರವನ್ನು ಕಡಿಮೆ ಮಾಡುವುದು ಒಳ್ಳೆಯದು ಎಂಬ ಇತ್ತೀಚಿನ ಅಧ್ಯಯನ ವರದಿಗಳನ್ನು ಮಾಧ್ಯಮಗಳು ಉಲ್ಲೇಖಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪೌಲ್, "ಇಂತಹ ಕಳವಳಗಳ ಬಗ್ಗೆ ಸಮತೋಲನ ಕಾಪಾಡುವ ಅಗತ್ಯವಿದೆ" ಎಂದರು.
ಇನ್ನು "ತಕ್ಷಣಕ್ಕೆ ಡೋಸೇಜ್ಗಳ ನಡುವಣ ಬದಲಾವಣೆಗೆ ಸಂಬಂಧಿಸಿದಂತೆ ಗಾಬರಿಯಾಗುವ ಅಗತ್ಯವಿಲ್ಲ. ಈ ಎಲ್ಲ ನಿರ್ಧಾರಗಳನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ಡೋಸೇಜ್ ನಡುವಣ ಅಂತರವನ್ನು ಹೆಚ್ಚಿಸುವುದರಿಂದ ಹೆಚ್ಚಿನ ಸಂಖ್ಯೆಯ ಜನರು ಮೊದಲ ಡೋಸ್ ಪಡೆಯಲು ಸಾಧ್ಯವಾಗುವುದರೊಂದಿಗೆ ಹೆಚ್ಚಿನ ಜನರಿಗೆ ರೋಗನಿರೋಧಕ ಶಕ್ತಿಯನ್ನು ನೀಡಲು ನೆರವಾಗುತ್ತದೆ" ಎಂದಿದ್ದಾರೆ.
"ಈ ಎಲ್ಲ ಕಳವಳಗಳನ್ನು ನಾವು ಸಮತೋಲದಲ್ಲಿಡಬೇಕಿದ್ದು, ದಯವಿಟ್ಟು ನಾವು ಸಾರ್ವಜನಿಕ ವಲಯದಲ್ಲಿ ಈ ಕುರಿತು ಸಂವಾದ ಹೊಂದಬಹುದು. ಆದರೂ ಈ ಬಗ್ಗೆ ತಿಳುವಳಿಕೆ ಉಳ್ಳವರು ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ. ಹಾಗಾಗಿ ದಯವಿಟ್ಟು ಅವರ ನಿರ್ಧಾರವನ್ನು ಗೌರವಿಸಿ" ಎಂದು ಹೇಳಿದ್ದಾರೆ.