ಬೆಂಗಳೂರು, ಜೂ 12 (DaijiworldNews/MS): ಜುಲೈ 1 ರಿಂದ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ 2021-2022 ಶೈಕ್ಷಣಿಕ ವರ್ಷದ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜೂನ್ 15 ರಿಂದ ಹೊಸ ಶೈಕ್ಷಣಿಕ ವರ್ಷದ ತಯಾರಿ ಆರಂಭವಾಗಲಿದ್ದು, ಶಾಲಾ ಪ್ರವೇಶ, ದಾಖಲಾತಿ ಆಂದೋಲನ, ಶಾಲಾ ಹಂತದ ವಾರ್ಷಿಕ ಕ್ರಿಯಾ ಯೋಜನೆಗೆ ಪೂರ್ವ ಸಿದ್ಧತೆ ನಡೆಸಲು ಶಿಕ್ಷಣ ಇಲಾಖೆ ಸೂಚಿಸಿದೆ.
ಕೊವೀಡ್ ಕಾರಣದಿಂದ 5ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಬದಲು ಆನ್'ಲೈನ್ ಮತ್ತು ಆಫ್'ಲೈನ್ ನಲ್ಲಿ ಪಠ್ಯ ಬೋಧನೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಇದಲ್ಲದೆ ಕೇಂದ್ರ ಸರ್ಕಾರದ ದೀಕ್ಷಾ ಆಯಪ್ ನಲ್ಲಿ 1 ರಿಂದ 10ನೇ ತರಗತಿ ಮಕ್ಕಳ ಪಠ್ಯಕ್ಕೆ ಸಂಬಂಧಿಸಿದ 22 ಸಾವಿರಕ್ಕೂ ಹೆಚ್ಚು ಕಂಟೆಂಟ್ ಗಳನ್ನು ಆಪ್ ಲೋಡ್ ಮಾಡಲಾಗಿದೆ. ಇದರಲ್ಲಿ ಮೌಲ್ಯವರ್ಧಿತ ಪಠ್ಯಪುಸ್ತಕಗಳೂ ಸಿಗಲಿವೆ . ಅವುಗಳೆಲ್ಲವನ್ನೂ ಡೌನ್ ಲೋಡ್ ಮಾಡಿಕೊಂಡು ಪಾಠ ಅಭ್ಯಾಸ ಮಾಡಬಹುದಾಗಿದೆ.
ಜೊತೆಗೆ ಶಿಕ್ಷಕರು ಪಠ್ಯ ಬೋಧನೆಯ ಪುಟ್ಟ ವಿಡಿಯೋ ಮಾಡಿ ಮಕ್ಕಳ ಪೋಷಕರಿಗೆ ಹಂಚಿಕೊಳ್ಳಬಹುದು. ತರಗತಿವಾರು ಮಕ್ಕಳ ಪೋಷಕರ ವಾಟ್ಸ್ ಆಯಪ್ ಗುಂಪುಗಳನ್ನು ಮಾಡಿ ಅವರನ್ನು ನಿಗದಿತವಾಗಿ ಸಂಪರ್ಕಿಸಿ ಮಕ್ಕಳ ಕಲಿಕೆಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ದೂರದರ್ಶನ ರೇಡಿಯೋ ಪಾಠ ಬೋಧನಾ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.