ಕೊಪ್ಪಳ, ಜೂ 12 (DaijiworldNews/PY): ರಾತ್ರಿ ಮಲಗುವ ಮೊದಲು ಬಿಚ್ಚಿಟ್ಟಿದ್ದ ಚಿನ್ನದ ಸರವನ್ನು ಮನೆಯ ಸಾಕು ನಾಯಿ ನುಂಗಿದ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದಿದೆ.
ಕಾರಟಗಿ ನಿವಾಸಿ ದಿಲೀಪ್ ಎನ್ನುವವರು ರಾತ್ರಿ ಮಲಗುವ ಮುನ್ನ 80 ಸಾವಿರ ಬೆಲೆಬಾಳುವ ಚಿನ್ನದ ಸರವನ್ನು ಬಿಚ್ಚಿಟ್ಟು ಮಲಗಿದ್ದರು. ಆದರೆ, ರಾತ್ರಿ ಅವರ ಮನೆಯ ಸಾಕು ನಾಯಿಯೇ ಚಿನ್ನದ ಸರವನ್ನು ನುಂಗಿಬಿಟ್ಟಿದೆ.
ಚಿನ್ನದ ಸರ ನಾಪತ್ತೆಯಾದ ಬಗ್ಗೆ ಮಾರನೇ ದಿನ ಬೆಳಕಿಗೆ ಬಂದಿದ್ದು, ಮನೆಯ ಸಾಕು ನಾಯಿಯೇ ಸರವನ್ನು ನುಂಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಕೂಡಲೇ ಅವರು ಪಶು ವೈದ್ಯರ ಬಳಿ ಪರೀಕ್ಷೆ ನಡೆಸಿದ್ದು, ನಾಯಿ ಸರ ನುಂಗಿರುವುದು ಖಚಿತಗೊಂಡಿದೆ. ಆದರೆ, ಶಸ್ತ್ರಚಿಕಿತ್ಸೆ ನಡೆಸುವುದು ಬೇಡ ಎಂದು ವೈದ್ಯರು ತಿಳಿಸಿದ್ದು, ಸಾಕುನಾಯಿಯ ಬಹಿರ್ದೆಸೆ ಮೂಲಕ ಚಿನ್ನದ ಸರ ಬರಲು ಕಾದಿದ್ದಾರೆ.
ಸದ್ಯ ಚಿನ್ನದ ಸರ ತುಂಡು ತುಂಡಾಗಿ ಅರ್ಧ ತೊಲೆಯಷ್ಟು ಮಾತ್ರ ಚಿನ್ನ ಹೊರಬಂದಿದ್ದು, ಉಳಿದ ಒಂದೂವರೆ ತೊಲೆಯಷ್ಟು ಚಿನ್ನ ಸಾಕುನಾಯಿಯ ಹೊಟ್ಟೆಯಲ್ಲಿ ಬಾಕಿಯಾಗಿದೆ. ಹಾಗಾಗಿ ನಾಯಿ ಬಹಿರ್ದೆಸೆಗೆ ಹೋಗುವುದನ್ನೆ ಕಾಯುವಂತಾಗಿದೆ.