ಛತ್ತೀಸಗಡ, ಜೂ 12 (DaijiworldNews/PY): ಛತ್ತೀಸಗಡದ ಬಸ್ತಾರ್ ಪ್ರದೇಶದ ಎರಡು ಜಿಲ್ಲೆಗಳಲ್ಲಿ ದಂಪತಿ ಸೇರಿದಂತೆ 13 ಮಂದಿ ನಕ್ಸಲರು ಪೊಲೀಸರು ಹಾಗೂ ಸಿಆರ್ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
ಸಾಂದರ್ಭಿಕ ಚಿತ್ರ
"ಸುಕ್ಮಾ ಜಿಲ್ಲೆಯಲ್ಲಿ 8 ಮಂದಿ ನಕ್ಸಲರು ಹಾಗೂ ನೆರೆಯ ದಂತೇವಾಡ ಜಿಲ್ಲೆಯಲ್ಲಿಯೂ 5 ಮಂದಿ ಮಾವೋವಾದಿಗಳು ಶರಣಾಗಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಲ್. ಧ್ರುವ್, "ಶರಣಾದ ಎಂಟು ಮಂದಿ ನಕ್ಸಲರಲ್ಲಿ ವಂಜಮ್ ಭೀಮಾ ಎನ್ನುವವರ ಬಂಧನಕ್ಕೆ 2 ಲಕ್ಷ ರೂ. ಘೋಷಣೆ ಮಾಡಲಾಗಿತ್ತು. ಈ ಸಂದರ್ಭ ಅವರ ಪತ್ನಿ ಮಾಧವಿ ಕಲಾವತಿ ಅವರೂ ಕೂಡಾ ಶರಣಾಗಿದ್ದಾರೆ" ಎಂದು ತಿಳಿಸಿದ್ದಾರೆ.
ಉಳಿದ ಆರು ಮಂದಿಯನ್ನು ರವಿ, ಕೋಸಾ, ದೇವಾ, ಡಿರ್ಡೊ ಗಂಗಾ, ಸೋಡಿ ದುಲಾ ಹಾಗೂ ಕವಾಸಿ ದೇವಾ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದರು. ದೇವಾ ಎನ್ನುವವರು ತಮ್ಮ ಬಳಿ ಇದ್ದ ಬಂದೂಕನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಕ್ಸಲ್ ಚಟುವಟಿಕೆಗಳನ್ನು ತೊರೆದ ಇವರಿಗೆ ತಲಾ 10,000 ರೂ. ಪ್ರೋತ್ಸಾಹ ಧನ ನೀಡಲಾಗಿದೆ.
"ದಂತೇವಾಡದಲ್ಲಿ ಈವರೆಗೆ 368 ನಕ್ಸಲರು ಶರಣಾಗಿದ್ದಾರೆ" ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.