ನವದೆಹಲಿ, ಜೂ.11 (DaijiworldNews/HR): ಯುವ ಕುಸ್ತಿಪಟು ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಕುಸ್ತಿಪಟು ಸುಶೀಲ್ ಕುಮಾರ್ ಅವರ ನ್ಯಾಯಾಂಗ ಬಂಧನವನ್ನು ದೆಹಲಿ ನ್ಯಾಯಾಲಯವು ಜೂನ್ 25 ರವರೆಗೆ ವಿಸ್ತರಿಸಿದೆ.
ಆಸ್ತಿ ವಿವಾದದ ಆರೋಪದ ಮೇರೆಗೆ ಅವರು ಮೇ 4 ಮತ್ತು 5 ರ ಮಧ್ಯರಾತ್ರಿಯಲ್ಲಿ ಕ್ರೀಡಾಂಗಣದಲ್ಲಿ ಸಾಗರ್ ಧಂಕರ್ ಮತ್ತು ಅವರ ಇಬ್ಬರು ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಈ ಕೊಲೆಯ ಮುಖ್ಯ ಅಪರಾಧಿ ಮತ್ತು ಮಾಸ್ಟರ್ ಮೈಂಡ್ ಸುಶೀಲ್ ಕುಮಾರ್ ಎಂದು ಪೊಲೀಸರು ಆರೋಪಿಸಿದ್ದಾರೆ ಮತ್ತು ಅದಕ್ಕೆ ಸೂಕ್ತ ಎಲೆಕ್ಟ್ರಾನಿಕ್ ಪುರಾವೆಗಳಿವೆ, ಅದರಲ್ಲಿ ಅವರು ಮತ್ತು ಅವರ ಸಹಚರರು ಧಂಕರ್ ಅವರನ್ನು ಹೊಡೆಯುವುದನ್ನು ಕಾಣಬಹುದಾಗಿದ್ದು, ಸಹ ಆರೋಪಿ ಅಜಯ್ ಕುಮಾರ್ ಸೆಹ್ರಾವತ್ ಅವರೊಂದಿಗೆ ಸುಶೀಲ್ ಕುಮಾರ್ ಅವರನ್ನು ಮೇ 23 ರಂದು ಬಂಧಿಸಲಾಯಿತು.
ಈಗಾಗಲೇ ಆರೋಪಿಗಳು 10 ದಿನಗಳ ನ್ಯಾಯಾಂಗ ಕಸ್ಟಡಿ ವಿಚಾರಣೆಗೆ ಒಳಗಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಸೇರಿದಂತೆ ಒಟ್ಟು 10 ಜನರನ್ನು ಈವರೆಗೆ ಬಂಧಿಸಲಾಗಿದೆ.