ದೆಹಲಿ, ಜೂ.11 (DaijiworldNews/HR): ವಿವೇಚನೆಯಿಲ್ಲದ ಹಾಗೂ ಅಪೂರ್ಣವಾದ ಲಸಿಕಾ ಅಭಿಯಾನವು ರೂಪಾಂತರ ತಳಿಗಳ ಹೊರಹೊಮ್ಮುವಿಕೆಯನ್ನು ಪ್ರಚೋದಿಸುತ್ತದೆ ಎಂದು ಏಮ್ಸ್ನ ವೈದ್ಯರು, ಕೊರೊನಾ ರಾಷ್ಟ್ರೀಯ ಕಾರ್ಯಪಡೆಯ ಸದಸ್ಯರು, ಸಾರ್ವಜನಿಕ ಆರೋಗ್ಯ ತಜ್ಞರ ತಂಡ ಹೇಳಿದ್ದು, ಕೊರೊನಾ ವೈರಸ್ ಸೋಂಕಿಗೆ ಒಳಗಾದವರಿಗೆ ಲಸಿಕೆ ಹಾಕುವ ಅಗತ್ಯವಿಲ್ಲ ಎಂದೂ ತಜ್ಞರು ಸಲಹೆ ನೀಡಿದ್ದಾರೆ.
ಮಕ್ಕಳನ್ನು ಸೇರಿದಂತೆ ದೊಡ್ಡ ಜನಸಮುದಾಯಕ್ಕೆ ಲಸಿಕೆ ನೀಡುವ ಪ್ರಯತ್ನಗಳ ಬದಲಿಗೆ, ದುರ್ಬಲರಿಗೆ ಮತ್ತು ಸೋಂಕಿನ ಅಪಾಯ ಇರುವವರಿಗೆ ಮೊದಲು ಲಸಿಕೆ ನೀಡಬೇಕು. ಇದೇ ಈ ಹೊತ್ತಿನ ಗುರಿಯಾಗಿರಬೇಕು ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಸಂಘ ಮತ್ತು ಇಂಡಿಯನ್ ಅಸೋಸಿಯೇಷನ್ ಆಫ್ ಪ್ರಿವೆಂಟಿವ್ ಅಂಡ್ ಸೋಶಿಯಲ್ ಮೆಡಿಸಿನ್ ನ ತಜ್ಞರು ವರದಿ ನೀಡಿದ್ದಾರೆ.
ಇನ್ನು ಎಲ್ಲರಿಗೂ ಒಂದೇ ಬಾರಿಗೆ ಲಸಿಕೆ ಕೊಡುವ ಪ್ರಯತ್ನಗಳಿಂದ ಮಾನವ ಮತ್ತು ಇತರ ಸಂಪನ್ಮೂಲಗಳು ಬರಿದಾಗುತ್ತವೆ ಎಂದು ತಜ್ಞರು ವರದಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ತಿಳಿಸಿದ್ದಾರೆ.
"ಕೊರೊನಾ ಸೋಂಕಿಗೆ ಒಳಗಾದವರಿಗೆ ಲಸಿಕೆ ನೀಡುವ ಅಗತ್ಯವಿಲ್ಲ. ನೈಸರ್ಗಿಕವಾಗಿ ಸೋಂಕುಗೊಂಡ ನಂತರ ಲಸಿಕೆ ಪ್ರಯೋಜನಕಾರಿ ಎಂಬುದಕ್ಕೆ ಪುರಾವೆಗಳು ಲಭ್ಯವಾದ ಬಳಿಕ ಈ ಜನರಿಗೆ ಲಸಿಕೆ ನೀಡಬಹುದು" ಎಂದು ವರದಿಯಲ್ಲಿ ತಿಳಿಸಲಾಗಿದೆ.