ಬೆಂಗಳೂರು,ಜೂ 11 (DaijiworldNews/MS): ಐಬಿಪಿಎಸ್ ನಡೆಸುವ ಪ್ರಾದೇಶಿಕ, ಗ್ರಾಮೀಣ ಬ್ಯಾಂಕಿಂಗ್ (ಆರ್ಆರ್ಬಿ) ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡೂ ಈ ಬಾರಿ ಕನ್ನಡದಲ್ಲಿಯೂ ನಡೆಯಲಿದ್ದು, ಐಬಿಪಿಎಸ್ನ ನಡೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹೇಳಿದ್ದಾರೆ.ಐಬಿಪಿಎಸ್ ಪರೀಕ್ಷೆ ಕನ್ನಡದಲ್ಲೇ ನಡೆಸುವಂತೆ ಮಾಡಿದ ಕನ್ನಡದ ಮನಸ್ಸುಗಳನ್ನೂ ನಾನು ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.
ಆದರೆ, ಐಬಿಪಿಎಸ್ ಪರೀಕ್ಷೆಗಳಲ್ಲಿನ ಕನ್ನಡಿಗರಾದ ನಮ್ಮ ಬೇಡಿಕೆ ಇಷ್ಟೇ ಅಲ್ಲ. ಐಬಿಪಿಎಸ್ ಆಯ್ಕೆ ಕಟ್ಟಲೆಗಳಲ್ಲಿ ನಮ್ಮದು ಇನ್ನೂ ಆಕ್ಷೇಪಗಳಿವೆ. 2014ಕ್ಕೂ ಮುನ್ನ ಇದ್ದ ನೇಮಕಾತಿ ಕಟ್ಟಲೆಗಳನ್ನೇ ಜಾರಿಗೆ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ. ಕರ್ನಾಟಕದಲ್ಲಿ ಕನ್ನಡಿಗನಿಗೇ ಬ್ಯಾಂಕಿಂಗ್ ನೌಕರಿ ಸಿಗುವಂತೆ ಮಾಡಲು ಇದು ಅತ್ಯಗತ್ಯ 2014ಕ್ಕೆ ಮುನ್ನ ಕರ್ನಾಟಕದಲ್ಲಿನ ಬ್ಯಾಂಕ್ ಸಿಬ್ಬಂದಿಗೆ ಕನ್ನಡ ಗೊತ್ತಿರಬೇಕೆಂಬ ನಿಯಮವಿತ್ತು. ನಂತರ ಇದನ್ನು ತೆಗೆದು, ಕೆಲಸಕ್ಕೆ ಸೇರಿದ 6 ತಿಂಗಳಲ್ಲಿ ಕನ್ನಡ ಕಲಿಯಬೇಕೆಂದು ಹೇಳಲಾಯಿತು. ಇದರಿಂದಾಗಿ ರಾಜ್ಯದ ಬ್ಯಾಂಕ್ಗಳಲ್ಲಿ ಕನ್ನಡ ತಿಳಿಯದವರೇ ತುಂಬಿದ್ದಾರೆ. ಇದು ಕನ್ನಡಿಗರಿಗೆ ಸಮಸ್ಯಾತ್ಮಕವಾಗಿದೆ. ಅಪಮಾನಗಳೂ ಆಗುತ್ತಿವೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಕನ್ನಡಿಗರನ್ನು ಹಿಂದಿ ಅಥವಾ ಇಂಗ್ಲಿಷ್ನಲ್ಲಿ ಮಾತನಾಡುವಂತೆ ಒತ್ತಾಯಿಸುವುದು, ಕನ್ನಡಿಗರ ಬಗ್ಗೆ ನಿರ್ಲಕ್ಷ್ಯ ತೋರುವ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇವೆ. 2014ಕ್ಕೆ ಮೊದಲಿದ್ದ ಐಬಿಪಿಎಸ್ ಕಟ್ಟಲೆಗಳನ್ನು ಮರಳಿ ಜಾರಿಗೆ ತರುವುದೇ ಇದಕ್ಕೆ ಏಕೈಕ ಪರಿಹಾರ. ಅತ್ಯಗತ್ಯ ಸೇವೆಯಾಗಿರುವ ಬ್ಯಾಂಕಿಂಗ್ ವಲಯದಲ್ಲಿ ಕನ್ನಡಿಗರೇ ಇರಬೇಕು. ಈ ಬಾರಿ ಐಬಿಪಿಎಸ್ ನಡೆಸುತ್ತಿರುವ ಬ್ಯಾಂಕಿಂಗ್ ಪರೀಕ್ಷೆಗಳಲ್ಲಿ ಕರ್ನಾಟಕದಲ್ಲಿ ಒಂದೂ ಹುದ್ದೆ ಇಲ್ಲ. ರಾಜ್ಯದ ಪ್ರತಿ ತಾಲ್ಲೂಕು, ಜಿಲ್ಲಾ ಕೇಂದ್ರದಲ್ಲಿಯೂ ಕೆವಿಜಿ, ಕೆವಿಜಿಬಿ ಬ್ಯಾಂಕ್ಗಳಿವೆ. ಆದರೂ ಒಂದೂ ಹುದ್ದೆ ಇಲ್ಲದಿರುವುದು ಆಶ್ಚರ್ಯ ತಂದಿದೆ. ಹುದ್ದೆಗಳನ್ನು ಮರುನಿಗದಿ ಮಾಡಿ ಹೊಸದಾಗಿ ಅರ್ಜಿ ಆಹ್ವಾನಿಸುವುದು ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ
ಈ ಬಾರಿ ಕನ್ನಡದಲ್ಲಿ ಪರೀಕ್ಷೆ ಬರೆದು ಪಾಸಾಗುವ ಕನ್ನಡಿಗ ಅಭ್ಯರ್ಥಿಗಳು ಅನಿವಾರ್ಯವಾಗಿ ಬೇರೆ ರಾಜ್ಯಗಳಲ್ಲಿ ಕೆಲಸ ಮಾಡಬೇಕಾದ ಸನ್ನಿವೇಶ ಬರುತ್ತದೆ. ಕರ್ನಾಟಕದಲ್ಲಿಯೂ ಹುದ್ದೆ ನಿಗದಿ ಮಾಡಿ ಮರು ಅರ್ಜಿ ಆಹ್ವಾನಿಸುವುದು ಸೂಕ್ತ. ಈ ಸಂಬಂಧ ರಾಜ್ಯದ ಎಲ್ಲರೂ ದನಿ ಎತ್ತುವುದು ಅಗತ್ಯವಿದೆ. ಕನ್ನಡಿಗ ಅಭ್ಯರ್ಥಿಗಳಿಗೆ ನ್ಯಾಯ ಕಲ್ಪಿಸಬೇಕಿದೆ ಎಂದು ಅವರು ಹೇಳಿದ್ದಾರೆ.