ಹಾಸನ ಜೂ 11 (DaijiworldNews/MS): ಬಿಜೆಪಿ ರಾಜ್ಯದ ಉಸ್ತುವಾರಿ ಅರುಣ್ ಸಿಂಗ್ ಅವರು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದು, ಮುಂದಿನ ಎರಡು ವರ್ಷ ನಾನೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತೇನೆ ಎಂಬ ಹೇಳಿಕೆ ನೀಡುವ ಮೂಲಕ ಬಿ.ಎಸ್. ಯಡಿಯೂರಪ್ಪ ಅವರು ಸಿಎಂ ಬದಲಾವಣೆ ಬಗೆ ಕೇಳಿ ಬರುತ್ತಿದ್ದ ಚರ್ಚೆಗೆ ಪರೋಕ್ಷವಾಗಿ ಇತಿಶ್ರೀ ಹಾಡಿದ್ದಾರೆ.
ಶುಕ್ರವಾರ ಹಾಸನದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮೇಲೆ ವರಿಷ್ಟರು ಇಟ್ಟಿರುವ ನಂಬಿಕೆ ಚ್ಯುತಿಯಾಗದಂತೆ ಕೆಲಸ ಮಾಡುತ್ತೇನೆ .ಮುಂದಿನ ಎರಡು ವರ್ಷ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮುಂತಾದವರು ಇಟ್ಟಿರುವ ವಿಶ್ವಾಸದಿಂದ ರಾಜ್ಯದ ಅಭಿವೃದ್ದಿಗೆ ಶಕ್ತಿ ಮೀರಿ ಪ್ರಯತ್ನಿಸುವೆ ಎಂದು ಹೇಳಿದ್ದಾರೆ.
ಕೋವಿಡ್ ಲಾಕ್ಡೌನ್ನಿಂದಾಗಿ ರಾಜ್ಯದ ಹಣಕಾಸು ಸ್ಥಿತಿ ಹದಗೆಟ್ಟಿದ್ದರೂ ಬಡವರ ಅನುಕೂಲಕ್ಕಾಗಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇನ್ನು ಸಂಭವ್ಯ ಕೊರೋನಾ 3ನೇ ಅಲೆಯಲ್ಲಿ ಯಾವುದೇ ಅನಾಹುತ ಆಗದಂತೆ ಸಿದ್ಧತೆ ಮಾಡಲಾಗುತ್ತಿದೆ ಎಂದು ಇದೇ ವೇಳೆ ಹೇಳಿದರು.
ಇದೇ ವೇಳೆ ಕೋವಿಡ್ ಬಗ್ಗೆ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ ಎಂಬ ವಿರೋಧ ಪಕ್ಷದವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಕೋವಿಡ್ ಸುಳ್ಳು ಲೆಕ್ಕ ಕೊಡುತ್ತೇವೆ ಅಂದಿದ್ದು ಯಾರು..? ಅದರಿಂದ ನಮಗೇನು ಲಾಭ ಎಂದು ಪ್ರಶ್ನಿಸಿದರು.