ಬೆಂಗಳೂರು, ಜೂ.11 (DaijiworldNews/HR): ಕರ್ನಾಟಕದಲ್ಲಿ ಆರ್ಥಿಕವಾಗಿ ನಷ್ಟವಾಗಿರುವುದರಿಂದ ಕೆಲವು ವಿನಾಯಿತಿ ಕೊಡಲಾಗಿದೆ. ಒಂದು ವೇಳೆ ವಿನಾಯತಿಯಿಂದ ಸೋಂಕು ಹೆಚ್ಚಳವಾದರೆ ಮತ್ತೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದ ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಶೇ.10ಕ್ಕಿಂತ ಹೆಚ್ಚು ಸೋಂಕು ಇರುವ ಜಿಲ್ಲೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. 5% ಒಳಗೆ ಸೋಂಕು ಇರುವ ಜಿಲ್ಲೆಗಳು ಎಚ್ಚರ ತಪ್ಪಬಾರದು, ಅಧಿಕ ಟೆಸ್ಟ್ ಗಳನ್ನು ಮಾಡಲು ಕ್ರಮವಹಿಸಬೇಕು" ಎಂದಿದ್ದಾರೆ.
ಇನ್ನು ಅಂತಾರಾಜ್ಯ, ಹೊರ ದೇಶದಿಂದ ಬರುವವರಿಗೆ ಚೆಕ್ ಪಾಯಿಂಟ್ಗಳಲ್ಲಿ ಕಡ್ಡಾಯವಾಗಿ ಟೆಸ್ಟ್ ಮಾಡಬೇಕು. ಒಂದು ಗ್ರಾಮದಲ್ಲಿ ಐದು ಸೋಂಕಿತರು ಕಂಡು ಬಂದರೇ ಅ ಗ್ರಾಮವನ್ನೇ ಸೀಲ್ ಡೌನ್ ಮಾಡಲೇಬೇಕು" ಎಂದು ಸೂಚನೆ ನೀಡಿದ್ದಾರೆ.
ಲಾಕ್ಡೌನ್ ಸಡಿಲಿಕೆ ಮಾಡಿದರೂ ಜನರು ಎಚ್ಚರಿಕೆಯಿಂದ ಇರಬೇಕು. ಎರಡು ಡೋಸ್ ಲಸಿಕೆ ಪಡೆಯೋವರೆಗೂ ಜನ ಎಚ್ಚರವಾಗಿ ಇರಬೇಕು. ರಾಜ್ಯದಲ್ಲಿ ಕನಿಷ್ಠ 70% ಡೋಸ್ ಸಂಪೂರ್ಣವಾದ ಮೇಲೆ ನಾವು ಮೊದಲಿನಂತೆ ಆರಾಮವಾಗಬಹುದು" ಎಂದು ಹೇಳಿದ್ದಾರೆ.