ನವದೆಹಲಿ,ಜೂ.11 (DaijiworldNews/HR): ಜೂನ್ 14ರಂದು ವಿಶ್ವಸಂಸ್ಥೆಯು ವರ್ಚುವಲ್ ವಿಧಾನದ ಮೂಲಕ ಆಯೋಜಿಸಿರುವ ಉನ್ನತ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಣ್ಣಿನ ಗುಣಮಟ್ಟ ನಾಶ, ಮರುಭೂಮೀಕರಣ ಹಾಗೂ ಬರ ಪರಿಸ್ಥಿತಿ ಕುರಿತು ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಕಾರ್ಯಕ್ರಮವನ್ನು ವಿಶ್ವಸಂಸ್ಥೆಯ 75ನೇ ಸಾಮಾನ್ಯಸಭೆಯ ಅಧ್ಯಕ್ಷರಾದ ವೋಲ್ಕನ್ ಬೊಜ್ಕಿರ್ ಅವರು ಆಯೋಜಿಸಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರು ಮರುಭೂಮೀಕರಣ ವಿರುದ್ಧ ಹೋರಾಟದ ವಿಶ್ವಸಂಸ್ಥೆಯ ಸಮಾವೇಶದ (ಯುಎನ್ಸಿಸಿಡಿ) 14ನೇ ಅಧಿವೇಶನದ ಅಧ್ಯಕ್ಷರಾಗಿದ್ದು, ಈ ಅಧಿವೇಶನಕ್ಕೆ ಮೋದಿ ಅವರು 2019ರ ಸೆಪ್ಟೆಂಬರ್ನಲ್ಲಿ ಚಾಲನೆ ನೀಡಿದ್ದರು.
ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಅಮೀನಾ ಮೊಹಮ್ಮದ್, ಯುಎನ್ಸಿಸಿಡಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಇಬ್ರಾಹಿಂ ಥಾಯ್ವ್ ಕೂಡ ಈ ಕಾರ್ಯಕ್ರಮವನ್ನು ಉದ್ಧೇಶಿಸಿ ವಿಚಾರ ಮಂಡನೆ ಮಾಡಲಿದ್ದಾರೆ ಎಂದು ವರದಿಯಾಗಿದೆ.