ನವದೆಹಲಿ, ಜೂ.11 (DaijiworldNews/HR): ಕೊರೊನಾ ಲಸಿಕೆ ಅಭಿಯಾನಕ್ಕಾಗಿ ಪ್ರಾರಂಭಿಸಿರುವ ಕೋ-ವಿನ್ ವೆಬ್ಸೈಟ್ ಹ್ಯಾಕ್ ಆಗಿದೆ ಎಂಬುದು ಸುಳ್ಳು ಸುದ್ದಿಯಾಗಿದ್ದು, ಯಾವುದೇ ಡೇಟಾ ಸೋರಿಕೆಯಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾಧ್ಯಮ ವರದಿಗಳನ್ನು ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ಕೋ-ವಿನ್ ವೆಬ್ಸೈಟ್ ಹ್ಯಾಕ್ ಆಗಿದೆ ಎಂಬ ವರದಿಗಳೆಲ್ಲ ನಕಲಿ, ಸುರಕ್ಷಿತ ಡಿಜಿಟಲ್ ವ್ಯವಸ್ಥೆಯಲ್ಲಿ ಪೋರ್ಟಲ್ ಎಲ್ಲ ವ್ಯಾಕ್ಸಿನೇಷನ್ ಡೇಟಾವನ್ನು ಸಂಗ್ರಹಿಸಿಡುತ್ತದೆ" ಎಂದಿದೆ.
ಇನ್ನು ಈ ಮೊದಲು ಕೋ-ವಿನ್ ಅನ್ನು ಹ್ಯಾಕ್ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದು, ಇದು ಆಧಾರರಹಿತ ಎಂದು ಕೇಂದ್ರ ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೊರೊನಾ ನಿಯಂತ್ರಣ ಕುರಿತ ದತ್ತಾಂಶ ನಿರ್ವಹಣೆ ಮತ್ತು ತಂತ್ರಜ್ಞಾನದ ಉನ್ನತ ಸಮಿತಿ ಅಧ್ಯಕ್ಷ ಡಾ. ಆರ್.ಎಸ್. ಶರ್ಮಾ, "ಕೋ-ವಿನ್ ವ್ಯವಸ್ಥೆ ಹ್ಯಾಕ್ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗಿರುವ ಸುದ್ದಿ ನಮ್ಮ ಗಮನಕ್ಕೆ ಬಂದಿದ್ದು, ಈ ಹಿನ್ನೆಲೆಯಲ್ಲಿ ಕೋ-ವಿನ್, ಎಲ್ಲ ವ್ಯಾಕ್ಸಿನೇಷನ್ ಡೇಟಾವನ್ನು ಸುರಕ್ಷಿತ ಡಿಜಿಟಲ್ ವ್ಯವಸ್ಥೆಯಲ್ಲಿ ಸಂಗ್ರಹಿಸಿಡುತ್ತದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ" ಎಂದು ಹೇಳಿದ್ದಾರೆ.