ಕಾಶ್ಮೀರ, ಜೂ 11 (DaijiworldNews/MS): ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ನೂರ್ಬಾಗ್ನ ಸ್ವೀಪರ್ಸ್ ಕಾಲೋನಿಯಲ್ಲಿ ಗುರುವಾರ ಸಂಜೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಕನಿಷ್ಠ 20 ಮನೆಗಳು ಬೆಂಕಿಯ ಜ್ವಾಲೆಗೆ ಸುಟ್ಟು ಕರಕಲಾಗಿದೆ.
ಮನೆಯೊಂದರಿಂದ ಎಲ್ಪಿಜಿ ಅನಿಲ ಸೋರಿಕೆಯಾದ ಕಾರಣ ಬೆಂಕಿ ಪ್ರಾರಂಭವಾಗಿದೆ ಎಂದು ವರದಿಯಾಗಿದೆ. ಅಡುಗೆ ಅನಿಲಕ್ಕೆ ಹತ್ತಿದ ಬೆಂಕಿ ಕ್ಷಣ ಮಾತ್ರದಲ್ಲೇ ಪರಿಸರದ ಇತರ ಮನೆಗಳಿಗೆ ಹರಡಿದೆ. ಪೊಲೀಸರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಕೂಡಲೇ ಸ್ಥಳಕ್ಕಾಗಮಿಸಿದ ಬೆಂಕಿ ನಂದಿಸಲಾರಂಭಿಸಿದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಿರಿದಾದ ರಸ್ತೆಗಳ ಕಾರಣದಿಂದ ಅಗ್ನಿ ಶಾಮಕ ದಳ ವಾಹನಗಳು ತೆರಳವುದು ಕಷ್ಟವಾಯಿತು ಎಂದು ಪೊಲೀಸರೊಬ್ಬರು ಹೇಳಿದ್ದಾರೆ. ಅದಾಗ್ಯೂ ಐದು ಅಗ್ನಿ ಶಾಮಕದ ದಳ ವಾಹನ ಮತ್ತು ಎರಡು ಸೇನಾ ವಾಹನದಿಂದ ಬೆಂಕಿ ನಂದಿಸುವ ಕಾರ್ಯ ಮಾಡಲಾಗುತ್ತಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ. ಬೆಂಕಿ ನಂದಿಸುವ ಕೆಲಸ ನಡೆಯುತ್ತಿದೆ. ಸಾವು ನೋವುಗಳ ಬಗ್ಗೆ ಇನ್ನಷ್ಟೇ ವರದಿಯಾಗಬೇಕಿದೆ