ಉತ್ತರ ಕನ್ನಡ, ಜೂ. 10 (DaijiworldNews/SM): ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಬಂಧಿಸಲಾಗಿದೆ. ಕಳೆದ ೮ ವರ್ಷಗಳಿಂದ ಭಟ್ಕಳದಲ್ಲಿ ಪಾಕ್ ಮೂಲದ ಮಹಿಳೆ ಅಕ್ರಮವಾಗಿ ವಾಸವಾಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಪಾಕಿಸ್ತಾನ ಪೌರತ್ವ ಹೊಂದಿದ್ದ ಖತೀಜಾ ಮೆಹರಿನ್ ಬಂಧಿತ ಮಹಿಳೆಯಾಗಿದ್ದಾಳೆ.
ಭಟ್ಕಳ ತಾಲೂಕಿನ ನವಾಯತ್ ಕಾಲನಿಯಲ್ಲಿ ಮಹಿಳೆ ಅಕ್ರಮವಾಗಿ ನೆಲೆಸಿದ್ದು ಈ ಬಗ್ಗೆ ಜೂನ್ 8 ರಂದು ಮಾಹಿತಿ ಲಭಿಸಿತ್ತು. ಆಕೆಯನ್ನು ಬಂಧಿಸುವ ಹಿನ್ನೆಲೆಯಲ್ಲಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡು ಆಕೆಯನ್ನು ಬಂಧಿಸಲಾಗಿದೆ ಎಂದು ಉತ್ತರ ಕನ್ನಡ ಎಸ್ಪಿ ಶಿವಪ್ರಕಾಶ ದೇವರಾಜು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಪೌರತ್ವ ಹೊಂದಿದ್ದ ಖತೀಜಾ ಮೆಹರಿನ್ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಟ್ಕಳದಲ್ಲಿ ನೆಲೆಸಿದ್ದಳು. ಭಟ್ಕಳದ ನವಾಯತ್ ಕಾಲನಿಯ ಜಾವೀದ್ ಮೊಹಿದ್ದೀನ್ ಜತೆ ದುಬೈನಲ್ಲಿ ವಿವಾಹವಾಗಿತ್ತು ಎನ್ನುವ ಮಾಹಿತಿ ಲಭಿಸಿದೆ.
2014ರಲ್ಲಿ ಮೂರು ತಿಂಗಳ ಪ್ರವಾಸಿ ವೀಸಾದ ಮೇಲೆ ಭಾರತಕ್ಕೆ ಬಂದು ಹಿಂದಿರುಗಿದ್ದ ಈಕೆ, 2015ರಲ್ಲಿ ಅಕ್ರಮವಾಗಿ ಭಾರತಕ್ಕೆ ಬಂದು ತನ್ನ ಪತಿಯ ಮನೆಯಾದ ಭಟ್ಕಳದ ನವಾಯತ್ ಕಾಲನಿಯಲ್ಲಿ ತನ್ನ 3 ಮಕ್ಕಳೊಂದಿಗೆ ವಾಸವಾಗಿದ್ದಳು ಎನ್ನಲಾಗಿದೆ.
ವಿದೇಶಿ ಕಾಯ್ದೆ ಉಲ್ಲಂಘನೆ ಸೇರಿದಂತೆ ಇತರ ಸೆಕ್ಷನ್ಗಳ ಅಡಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.