ಪಾಲಕ್ಕಾಡ್, ಜೂ.10 (DaijiworldNews/HR): ರಹಮಾನ್ ಎಂಬ ಯುವಕ ನೆರೆಮನೆಯ ಸಜಿತಾ ಎಂಬ ಯುವತಿಯನ್ನು ಪ್ರೀತಿಸಿದ್ದು, ಇದಕ್ಕೆ ಪೋಷಕರ ವಿರೋಧ ವ್ಯಕ್ತವಾಗಿದ್ದರಿಂದ ಸಜಿತಾ ಮನೆ ಬಿಟ್ಟು ಬಂದಿದ್ದಳು. ಈ ವೇಳೆ ಆಕೆಯನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂದು ತಿಳಿಯದ ಆತ ತನ್ನ ಕೋಣೆಯಲ್ಲೇ ಬರೋಬ್ಬರಿ 10 ವರ್ಷಗಳ ಕಾಲ ಅಡಗಿಸಿಟ್ಟ ಘಟನೆ ಪಾಲಕ್ಕಾಡ್ ಬಳಿಯ ಆಯಿಲೂರ್ನಲ್ಲಿ ನಡೆದಿದೆ.
ಆತನ ಕೋಣೆಗೆ ಹೊರಗೆ ಮತ್ತು ಒಳಗಿನಿಂದ ಲಾಕ್ ಮಾಡಬಹುದಾಗಿದ್ದು, ಸಜಿತಾ ನಿತ್ಯಕರ್ಮಗಳಿಗಾಗಿ ರಾತ್ರಿ ವೇಳೆ ಮಾತ್ರ ಹೊರಬರುತ್ತಿದ್ದಳು. ಮೂರು ತಿಂಗಳ ಹಿಂದೆ ರಹಮಾನ್ ತನ್ನ ಮನೆಯಿಂದ ನಾಪತ್ತೆಯಾಗಿದ್ದು, ಅವರ ಸಹೋದರ ಅವನನ್ನು ಗುರುತಿಸಿದಾಗ ಇಡೀ ವಿಷಯ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.
ಈ ಘಟನೆಯನ್ನು ಪೊಲೀಸರು ಮಧ್ಯಪ್ರವೇಶಿಸಿದ ಬಳಿಕ ರಹಮಾನ್ ತಿಳಿಸಿದ್ದು, ಪೊಲೀಸರು ರಹಮಾನ್ ಮತ್ತು ಸಜಿತಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಸಜಿತಾ ಅವನೊಂದಿಗೆ ವಾಸಿಸಲು ಬಯಸಿದ್ದರಿಂದ ಅವನ ಜೊತೆ ಹೋಗಲು ಕೋರ್ಟ್ ಅನುಮತಿ ನೀಡಿದೆ ಎನ್ನಲಾಗಿದೆ.
ಇನ್ನು ಕುಟುಂಬಗಳ ವಿರೋಧಕ್ಕೆ ಹೆದರಿ ಸಜಿತಾ ಫೆಬ್ರವರಿ 2, 2010ರಂದು ತನ್ನ ಮನೆ ಬಿಟ್ಟು ಬಂದಿದ್ದು, ಆಕೆಯನ್ನು ರಹಮಾನ್ ತನ್ನ ಕೋಣೆಯಲ್ಲಿ ಅಡಗಿಸಿಟ್ಟಿದ್ದು ಅದು ಆತನ ಹೆತ್ತವರಿಗೂ ತಿಳಿದಿರಲಿಲ್ಲ ಎಂದು ವರದಿಯಾಗಿದೆ.
ಸಜಿತಾಳಿಗೆ ರಹಮಾನ್ ಕೋಣೆಯೊಳಗೆ ಆಹಾರವನ್ನು ನೀಡುತ್ತಿದ್ದು, ಪೋಷಕರನ್ನು ಹೊರತುಪಡಿಸಿ ರಹಮಾನ್ ಸಹೋದರಿ ಸಹ ಮನೆಯಲ್ಲಿ ವಾಸಿಸುತ್ತಿದ್ದರು. ಇನ್ನು ಸಜಿತಾ ಪೋಷಕರು 10 ವರ್ಷಗಳ ಹಿಂದೆ ಮಗಳು ಕಾಣೆಯಾಗಿದ್ದಾಳೆ ದೂರು ನೀಡಿದ್ದರು.
ಇನ್ನು 2021ರ ಮಾರ್ಚ್ 3ರಂದು ರಹಮಾನ್ ಕಾಣೆಯಾಗಿರುವುದಾಗಿ ಪೋಷಕರು ನೆನ್ಮಾರಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಹಮಾನ್ ನೆನ್ಮರಾ ಪಟ್ಟಣದಲ್ಲಿ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿರುವುದನ್ನು ಸಹೋದರ ನೋಡಿದ್ದರಿಂದ ಆತಂಕಗೊಂಡ ರಹಮಾನ್ ಸಮೀಪದಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದ ಪೊಲೀಸ್ ಸಿಬ್ಬಂದಿಯ ಸಹಾಯವನ್ನು ಕೋರಿದರು. ಪೊಲೀಸರು ರಹಮಾನ್ನನ್ನು ತಡೆದು ಠಾಣೆಗೆ ಕರೆದೊಯ್ದಾಗ ತಾನು ಮತ್ತು ಸಜಿತಾ ಮೂರು ತಿಂಗಳಿನಿಂದ ವಿಥುನಾಶೇರಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವುದಾಗಿ ರಹಮಾನ್ ಪೊಲೀಸರಿಗೆ ತಿಳಿಸಿದ್ದಾರೆ.
ಆ ಬಳಿಕ ಸಜಿತಾ ಅವರನ್ನು ಠಾಣೆಗೆ ಕರೆದು ಪ್ರಶ್ನಿಸಿದಾಗ, ರಹಮಾನ್ ನಡೆದ ಕಥೆಯನ್ನು ವಿವರಿಸಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಮನೆಯಿಂದ ಹೊರಬರಬೇಕು ಎಂದು ರಹಮಾನ್ ಮತ್ತು ಸಜಿತಾ ನಿರ್ಧರಿಸಿದ್ದು, ಅದರಂತೆ ಬಾಡಿಗೆ ಮನೆ ವಾಸವಾಗಿದ್ದರು.
ಹೆತ್ತವರಿಗೆ ತಿಳಿಯದಂತೆ ಆಯಿಲೂರ್ನ ಹೆಂಚಿನ ಮನೆಯ ಒಂದು ಸಣ್ಣ ಕೋಣೆಯೊಳಗೆ 10 ವರ್ಷ ಕಾಲ ಹೇಗೆ ಜೀವನ ಸಾಗಿಸಿದ್ದರೂ ಎಂಬುದು ನಂಬಲು ಕಷ್ಟವಾಗಿದೆ, ಸಜಿತಾ ಪೋಷಕರನ್ನು ಪ್ರಶ್ನಿಸಿದಾಗ ಅವರ ತಮ್ಮ ಮಗಳು ಮೃತಪಟ್ಟಿದ್ದಾಗಿ ಭಾವಿಸಿದ್ದರು. ಅಲ್ಲದೆ ಅವಳ ಹೆಸರನ್ನು ಪಡಿತರ ಚೀಟಿಯಿಂದ ತೆಗೆದುಹಾಕಲಾಗಿತ್ತು ಎಂದು ನೆನ್ಮರಾ ಸಬ್ ಇನ್ಸ್ಪೆಕ್ಟರ್ ಕೆ ನೌಫಲ್ ಹೇಳಿದ್ದಾರೆ.