ನವದೆಹಲಿ, ಜೂ.10 (DaijiworldNews/HR): ಕೇಂದ್ರ ಸರ್ಕಾರವು ರಾಜ್ಯಕ್ಕೆ ಇಂದು 15,520 ವಯಲ್ಸ್ ಒದಗಿಸಿದ್ದು, ಇದುವರೆಗೆ 40,470 ವಯಲ್ಸ್ ಎಂಫೊಟೆರಿಸಿನ್-ಬಿ ಒದಗಿಸಿದಂತಾಗಿದೆ. ಬ್ಲಾಕ್ ಪಂಗಸ್ ರೋಗದ ಚಿಕಿತ್ಸೆಗೆ ಈ ಔಷಧವನ್ನು ಬಳಸಲಾಗುತ್ತದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸದಾನಂದಗೌಡ, "ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇಂದು ಹೊಸದಾಗಿ 1.7 ಲಕ್ಷ ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಲಾಗಿದೆ" ಎಂದರು.
"ಜೂನ್ ತಿಂಗಳು ಆರಂಭದಿಂದ ಇಂದಿನವರೆಗೆ ಕೇಂದ್ರ ಸರ್ಕಾರವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 3.21 ಲಕ್ಷ ವಯಲ್ಸ್ ಎಂಫೊಟೆರಿಸಿನ್-ಬಿ ಹಂಚಿಕೆ ಮಾಡಿದ್ದು, ಆಮದು ಹೆಚ್ಚಿಸಲಾಗುತ್ತಿದೆ. ಸ್ವದೇಶಿಯವಾಗಿಯೂ ಈ ಔಷಧದ ಉತ್ಪಾದನೆ ಹೆಚ್ಚಾಗುತ್ತಿದೆ. ಇದರ ಲಭ್ಯತೆ ದೊರೆತಂತೆಲ್ಲಾ ರಾಜ್ಯಗಳಿಗೆ ಹಂಚಿಕೆ ಮಾಡಲಾಗುವುದು" ಎಂದರು.
ಇನ್ನು ಪ್ರಧಾನಿ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು, ರಸಗೊಬ್ಬರ ಉತ್ಪಾದನೆಗೆ ಸಂಬಂಧಿಸಿದ ಹೊಸ ಹೂಡಿಕೆ ನೀತಿಯ ಲಾಭವನ್ನು ರಾಮಗುಂಡಂ ರಸಗೊಬ್ಬರ ಮತ್ತು ರಾಸಾಯನಿಕ ಲಿಮಿಟೆಡ್ ಯೂರಿಯಾ ಕಾರ್ಖಾನೆಗೂ ವಿಸ್ತರಿಸಲು ಒಪ್ಪಿಗೆ ನೀಡಿದೆ" ಎಂದು ತಿಳಿಸಿದ್ದಾರೆ.