ನವದೆಹಲಿ, ಜೂ 10 (DaijiworldNews/MS): ಅಲೋಪತಿ ವಿವಾದದಲ್ಲಿ ಸಿಲುಕಿದ್ದ ಯೋಗಗುರು ಬಾಬಾ ರಾಮದೇವ್ ಇದೀಗ ಯೂಟರ್ನ್ ಹೊಡೆದಿದ್ದು, ತುರ್ತು ಪ್ರಕರಣಗಳು ಮತ್ತು ಶಸ್ತ್ರಚಿಕಿತ್ಸೆಗಳ ವಿಷಯದಲ್ಲಿ ಅಲೋಪತಿ ಉತ್ತಮವಾಗಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಯೋಗ ಗುರು ಹೇಳಿದ್ದಾರೆ.
ಅಲೋಪತಿ ಉತ್ತಮವಾಗಿದ್ದು, ಆದರೆ ಆಯುರ್ವೇದವು ಗುಣಪಡಿಸಲಾಗದ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತದೆ ಎಂದು ಹೇಳಿದ್ದಾರೆ. ಇದರೊಂದಿಗೆ ತಾವು ಕೊವೀಡ್ ಲಸಿಕೆಯನ್ನು ಪಡೆದುಕೊಳ್ಳುವುದಾಗಿ ಹೇಳಿದ್ದು, ಜನರಿಗೂ ಕೊರೊನಾ ಲಸಿಕೆ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಈ ಹಿಂದೆ ಬಾಬಾ ರಾಮದೇವ್, ಯೋಗ ಮತ್ತು ಆಯುರ್ವೇದದ ಡಬಲ್ ಡೋಸ್ ತೆಗೆದುಕೊಳ್ಳುತ್ತಿದ್ದೇನೆ. ಕೊರೊನಾ ಲಸಿಕೆ ಪಡೆಯುವ ಅಗತ್ಯವಿಲ್ಲ ಎಂದು ಹೇಳಿದ್ದರು. ವೈರಸ್ ನ ಎಷ್ಟು ರೂಪಾಂತರ ಬಂದರೂ ಸೋಂಕಿನ ಅಪಾಯಕ್ಕೆ ಒಳಗಾಗುವುದಿಲ್ಲವೆಂದು ಬಾಬಾ ರಾಮ್ದೇವ್ ಹೇಳಿಕೊಂಡಿದ್ದರು. ಯೋಗ ಎಲ್ಲವನ್ನೂ ನಿಭಾಯಿಸಲಿದೆ ಎಂದು ಅವರು ಹೇಳಿದ್ದರು.
"ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21 ರಿಂದ ಪ್ರತಿ ನಾಗರಿಕರಿಗೆ ಉಚಿತವಾಗಿ ಲಸಿಕೆ ಹಾಕುವ ಐತಿಹಾಸಿಕ ಘೋಷಣೆ ಮಾಡಿದ್ದಾರೆ. ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಅಲ್ಲದೆ ಜನರು ಯೋಗ ಮತ್ತು ಆಯುರ್ವೇದವನ್ನು ಅಭ್ಯಾಸ ಮಾಡಬೇಕು ಅದು ರೋಗದ ವಿರುದ್ಧ ರಕ್ಷಣಾತ್ಮಕ ಗುರಾಣಿಯನ್ನು ಸಿದ್ಧಪಡಿಸುತ್ತದೆ ಮತ್ತು ಕೊವೀಡ್ ಸಾವುನೋವುಗಳನ್ನು ಸಹ ತಡೆಯುತ್ತದೆ" ಎಂದು ಹೇಳಿದ್ದಾರೆ.