ನವದೆಹಲಿ, ಜೂ.10 (DaijiworldNews/HR): ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ ಸುಮಾರು 13,500 ಕೋಟಿ ವಂಚಿಸಿದ ಆರೋಪ ಹೊತ್ತಿರುವ ಮೆಹುಲ್ ಚೋಕ್ಸಿ ಅವರನ್ನು ಆಂಟಿಗುವಾ, ಬಾರ್ಬುಡಾದಿಂದ ಅಪಹರಿಸಿದ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿರುವ ಗುರ್ಜಿತ್ ಭಂಡಾಲ್, ತಮಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಸ್ಪಷ್ಟನೆ ನೀಡಿರುವ ಭಂಡಾಲ್, ಕೆರೆಬಿಯನ್ ದ್ವೀಪದಿಂದ ಮೇ 23ರಂದು ಬೆಳಗ್ಗೆ ವಿಹಾರ ನೌಕೆಯ ಮೂಲಕ ಹೊರಟಿದ್ದೆ ಎಂದು ಹೇಳಿರುವುದಾಗಿ ವರದಿಯಾಗಿದೆ.
ಆಂಟಿಗುವಾ ಪೊಲೀಸರಿಗೆ ನೀಡಿದ ದೂರಿನಲ್ಲಿ ಚೋಕ್ಸಿ, ಮೇ 23ರಂದು ಪ್ರೇಯಸಿ ಹಾಗೂ ಪ್ರಕರಣದ ಮತ್ತೊರ್ವ ಆರೋಪಿ ಬಾರ್ಬರಾ ಜರಾಬಿಕಾ ಅವರು ತಂಗಿದ್ದ ಸ್ಥಳಕ್ಕೆ ತೆರಳಿದ್ದಾಗ ಅಪಹರಣಕ್ಕೊಳಗಾಗಿದ್ದೇನೆ ಎಂದು ಆರೋಪಿಸಿ, ಈ ಕೃತ್ಯದ ಹಿಂದೆ ಗುರ್ಮಿತ್ ಸಿಂಗ್, ನರೇಂದರ್ ಸಿಂಗ್, ಜರಾಬಿಕಾ ಮತ್ತು ಇನ್ನಿತರ ಅಪರಿಚಿತ ವ್ಯಕ್ತಿಗಳನ್ನು ಹೆಸರಿಸಿದ್ದರು.
ಇನ್ನು ಚೋಕ್ಸಿ ಅವರನ್ನು ಅಪಹರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಗುರ್ಜಿತ್ ಭಂಡಾಲ್, ಪೊಲೀಸರ ತನಿಖೆಗೆ ಸಹಕರಿಸುವುದಾಗಿ ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ13,500 ಕೋಟಿ ವಂಚಿಸಿದ ಆರೋಪ ಹೊತ್ತಿರುವ ಚೋಕ್ಸಿ, ಆಂಟಿಗುವಾ, ಬಾರ್ಬುಡಾಗೆ ಪರಾರಿಯಾಗಿ 2018ರಲ್ಲಿ ಅಲ್ಲಿನ ಪೌರತ್ವ ಪಡೆದಿದ್ದು, ಮೇ 23ರಂದು ಅಲ್ಲಿಂದ ತಪ್ಪಿಸಿಕೊಂಡು ಡೊಮಿನಿಕಾಗೆ ಅಕ್ರಮ ಪ್ರವೇಶ ಪಡೆದ ಕಾರಣ ಪೊಲೀಸರು ಬಂಧಿಸಿದ್ದರು.